ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ, ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರಿಗೆ ಹೊಸ ತೊಂದರೆಗಳು ಎದುರಾಗಿದೆ. ಮದ್ಯನೀತಿ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ ಸಕ್ಸೇನಾ ಅವರು ಜಾರಿ ನಿರ್ದೇಶನಾಲಯ(ಇ.ಡಿ.)ಕ್ಕೆ ಅನುಮತಿ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿನ ನಂತರ ಕೇಜ್ರಿವಾಲ್ ಅವರಿಗೆ ಪ್ರಮುಖ ಪರೀಕ್ಷೆಯಾಗಿರುವ ದೆಹಲಿ ಚುನಾವಣೆಗೆ ಮುಂಚಿತವಾಗಿ ಈ ಮಂಜೂರಾತಿ ಬಂದಿದೆ.
ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ “ದೊಡ್ಡ ಮಟ್ಟದ ಭ್ರಷ್ಟಾಚಾರ” ಕಂಡುಬಂದಿದೆ ಎಂದು ಇಡಿ ಆರೋಪಿಸಿದೆ ಮತ್ತು ಆದ್ದರಿಂದ ಇ.ಡಿ. ಈ ತಿಂಗಳ ಆರಂಭದಲ್ಲಿ ಕೇಜ್ರಿವಾಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಲೆಫ್ಟಿನೆಂಟ್ ಗವರ್ನರ್ ವಿನಯಕುಮಾರ ಸಕ್ಸೇನಾ ಅವರ ಬಳಿ ಅನುಮತಿ ಕೋರಿತ್ತು. ಇ.ಡಿ. ಮಾರ್ಚ್ 21 ರಂದು ಆಗ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು ಮತ್ತು ಮೇ ತಿಂಗಳಲ್ಲಿ ಅವರು, ಪಕ್ಷ ಮತ್ತು ಇತರರ ವಿರುದ್ಧ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಇ.ಡಿ. ತನ್ನ ಅಂತಿಮ ಪ್ರಾಸಿಕ್ಯೂಷನ್ ದೂರಿನಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಮನೀಶ ಸಿಸೋಡಿಯಾ ಆಪಾದಿತ ಅಬಕಾರಿ ಹಗರಣದ ಮಾಸ್ಟರ್ ಮೈಂಡ್ ಎಂದು ಆರೋಪಿಸಿದೆ.
ಉನ್ನತ ಮೂಲಗಳ ಪ್ರಕಾರ, ತನಿಖಾ ಸಂಸ್ಥೆಯು ಕೇಜ್ರಿವಾಲ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ಆರೋಪಿತ ದಕ್ಷಿಣದ ಲಾಬಿಗೆ ಸಹಾಯ ಮಾಡಲು 2021-22 ಅಬಕಾರಿ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಹೇಳಿದೆ. ಇದಕ್ಕಾಗಿ ಕಿಕ್‌ಬ್ಯಾಕ್‌ಗಳನ್ನು ಪಡೆದಿದ್ದು, ಅದರಲ್ಲಿ ಒಂದಷ್ಟು ಹಣವನ್ನು ಎಎಪಿ ಗೋವಾ ವಿಧಾನಸಭಾ ಚುನಾವಣಾ ಪ್ರಚಾರದ ಮೂಲಗಳಲ್ಲಿ ಬಳಸಿದೆ ಎಂದು ಆರೋಪಿಸಿದೆ.
ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾಡಿದ ದೊಡ್ಡ ಆರೋಪಗಳಲ್ಲಿ ಮದ್ಯ ನೀತಿ ಹಗರಣವೂ ಸೇರಿದೆ. ಸಿಸೋಡಿಯಾ ಕೂಡ ಮದ್ಯ ನೀತಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು. ಅವರು 18 ತಿಂಗಳ ಜೈಲುವಾಸದ ನಂತರ ಆಗಸ್ಟ್‌ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ