ಕೂಜಳ್ಳಿಯಲ್ಲಿ ಡಿಸೆಂಬರ್‌ 29ರಂದು ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ

ಕುಮಟಾ: ಪಂಡಿತ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ-2024 ಸಂಗೀತೋತ್ಸವ ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭ ಡಿ. 29ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಪಂ. ವಿನಾಯಕ ತೊರ್ವಿ ಅವರಿಗೆ ಈ ಬಾರಿ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ದಿನವಿಡೀ ವೈವಿಧ್ಯಮಯ ಹಿಂದೂಸ್ತಾನೀ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪಂ. ವಿನಾಯಕ ತೊರ್ವಿ, ಮುಂಬೈನ ಕೃಷ್ಣ ಭಟ್ಟ ಅವರ ಗಾಯನ, ಮುಂಬೈನ ರಾಜನ್ ಮಾಶೇಲ್ಕರ ಅವರ ವಯೋಲಿನ್, ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರ ಶಹನಾಯಿ ವಾದನ ಕಾರ್ಯಕ್ರಮ, ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನ, ಬಾರ್ಕೂರಿನ ಇಂದಿರಾ ಎಂ. ಭಟ್ಟ ಗಾಯನ ಹಾಗೂ ಭಾರ್ಗವ ಭಟ್ಟ ಮತ್ತು ಅಜಯ ಹೆಗಡೆ ಅವರ ಬಾನ್ಸುರಿ-ಹಾರ್ಮೋನಿಯಂ ಜುಗಲ್ಬಂಧಿ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಗುಣವಂತೆಯ ಎನ್.ಜಿ. ಅನಂತಮೂರ್ತಿ, ಮುಂಬೈನ ಗುರುಶಾಂತ ಸಿಂಗ್, ಹೊಸಗದ್ದೆ ಮಹೇಶ ಹೆಗಡೆ, ಬೆಂಗಳೂರಿನ ಯೋಗೀಶ ಭಟ್ಟ, ಕಡತೋಕಾದ ವಿನೋದ ಭಂಡಾರಿ, ಹರಿಕೇರಿ ಗಣಪತಿ ಹೆಗಡೆ, ಅಂಸಳ್ಳಿ ಅಕ್ಷಯ ಭಟ್ಟ ಸಹಕರಿಸುವರು. ಹಾರ್ಮೋನಿಯಂನಲ್ಲಿ ಕೂಜಳ್ಳಿಯ ಗೌರೀಶ ಯಾಜಿ, ವರ್ಗಾಸರದ ಅಜೇಯ ಹೆಗಡೆ ಸಾಥ್ ನೀಡಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಪಂ. ಬಸವರಾಜ ಭಜಂತ್ರಿ, ಹೆಡಿಗ್ಗೊಂಡ, ಸ್ವರ ಸಂಗಮದ ಅಧ್ಯಕ್ಷ ಸುಬ್ರಾಯ ಜಿ. ಭಟ್ಟ ಕೂಜಳ್ಳಿ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ಎಸ್.ಎನ್. ಭಟ್ಟ ಪಾಲ್ಗೊಳ್ಳಲಿದ್ದಾರೆ..
ಪ್ರಶಸ್ತಿ ಪ್ರದಾನ:
ಸಂಜೆ 4 ಗಂಟೆ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯದ್ದು, ಬೆಂಗಳೂರಿನ ಪಂ. ವಿನಾಯಕ ತೊರ್ವಿ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಪ್ರಾಧ್ಯಾಪಕ, ಗುಣವಂತೆಯ ಡಾ. ನರಸಿಂಹ ಪಂಡಿತ, ಉಡುಪಿ ಆಭರಣ ಗ್ರೂಪ್‌ನ ಸಂಧ್ಯಾ ಸುಭಾಷ ಕಾಮತ್, ಹುಬ್ಬಳ್ಳಿಯ ರಂಗನಾಥ ಕಮತರ, ವೇಲಾ ಟೆಕ್ನಾಲಾಟಿಸ್‌ನ ಗಿರೀಶ ಹೆಗಡೆ, ಲೆಕ್ಕ ಪರಿಶೋಧಕ ಸಚಿನ್ ಬಿ.ಆರ್. ಹಾಗೂ ಕೂಜಳ್ಳಿಯ ಸುಬ್ರಾಯ ಜಿ.ಭಟ್‌ ಪಾಲ್ಗೊಳ್ಳಲಿದ್ದಾರೆ. ಷಡಕ್ಷರಿ ಗವಾಯಿ ಅಕಾಡೆಮಿಯ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸುವರು. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರಮುಖ ಸುದ್ದಿ :-   ಬೆಳಗಾವಿ | ಕಾರಿನ ಮೇಲೆ ಮಗುಚಿ ಬಿದ್ದ ಲಾರಿ ; ಇಬ್ಬರಿಗೆ ಗಾಯ

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement