ವಿದ್ಯುತ್ ಕಳ್ಳತನದ ಆರೋಪ ; ಸಮಾಜವಾದಿ ಪಕ್ಷದ ಸಂಸದರಿಗೆ ₹ 1.9 ಕೋಟಿ ದಂಡ..!

ಲಕ್ನೋ:  ಸಮಾಜವಾದಿ ಪಕ್ಷದ ಉತ್ತರ ಪ್ರದೇಶದ  ಸಂಭಾಲ್ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ತಮ್ಮ ನಿವಾಸದಲ್ಲಿ ವಿದ್ಯುತ್ ಕಳ್ಳತನ ಮಾಡಿದ ಆರೋಪಿತ ಪ್ರಕರಣದಲ್ಲಿ ಅವರಿಗೆ ₹ 1.91 ಕೋಟಿ ದಂಡ ವಿಧಿಸಲಾಗಿದೆ. ಸಂಸದರ ನಿವಾಸದಲ್ಲಿ ಎರಡು ವಿದ್ಯುತ್ ಮೀಟರ್‌ಗಳನ್ನು ಟ್ಯಾಂಪರಿಂಗ್ ಮಾಡಿರುವ ಪುರಾವೆಗಳು ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಈ ದಂಡ ವಿಧಿಸಿದೆ.
ಇಲಾಖೆಯು ಗುರುವಾರ ಸಂಸದ ಬಾರ್ಕ್ ನಿವಾಸಕ್ಕೆ ಭೇಟಿ ನೀಡಿ ಮೀಟರ್ ರೀಡಿಂಗ್‌ಗಳು ಮತ್ತು ಏರ್ ಕಂಡಿಷನರ್ (ಎಸಿ) ಮತ್ತು ಫ್ಯಾನ್‌ಗಳು ಸೇರಿದಂತೆ ಇತರ ವಿದ್ಯುತ್ ಉಪಕರಣಗಳನ್ನು ಪರಿಶೀಲಿಸಿತು. ಲಭ್ಯವಿರುವ ವಿದ್ಯುತ್ ಸಂಪರ್ಕವು ಲೋಡ್‌ನ ಎಂಟನೇ ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ಕಂಡುಕೊಂಡರು.

ರಾಜ್ಯ ವಿದ್ಯುತ್ ಇಲಾಖೆಯ ಪ್ರಕಾರ, ಬಾರ್ಕ್ ಅವರು 2 ಕಿಲೋವ್ಯಾಟ್ (kW) ಸಂಪರ್ಕವನ್ನು ತೆಗೆದುಕೊಂಡಿದ್ದಾರೆ, ಆದರೆ ಲೋಡ್ 16.5 kW ಆಗಿದೆ. ಎರಡು ದಿನಗಳ ಹಿಂದೆ ಅಳವಡಿಸಲಾದ ಹೊಸ ಸ್ಮಾರ್ಟ್ ಮೀಟರ್‌ಗಳಲ್ಲಿ 5.5 ಕಿಲೋವ್ಯಾಟ್ ವಿದ್ಯುತ್ ಲೋಡ್ ಕಂಡುಬಂದಿದೆ. ಬಾರ್ಕ್ ಅವರ ಕುಟುಂಬ ಸದಸ್ಯರು ಮನೆಯಲ್ಲಿ 10 kW ಸೌರ ಫಲಕ ಮತ್ತು 5 kW ಜನರೇಟರ್ ಅನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು – ಇದರೊಂದಿಗೆ ಸಂಸದರ ಮನೆ 19 kW ವಿದ್ಯುತ್ ಲೋಡ್ ಅನ್ನು ತೆಗೆದುಕೊಳ್ಳಬಹುದು. ಆದರೆ, ವಿದ್ಯುತ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಅವರು ಸೋಲಾರ್ ಪ್ಯಾನಲ್ ಗಳು ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

ನಿವಾಸದಲ್ಲಿ 50 ಕ್ಕೂ ಹೆಚ್ಚು ಎಲ್‌ಇಡಿ ಬಲ್ಬ್‌ಗಳು, ಡೀಪ್ ಫ್ರೀಜರ್, ಮೂರು ಸ್ಪ್ಲಿಟ್ ಎಸಿಗಳು, 2 ಫ್ರಿಜ್‌ಗಳು, ಕಾಫಿ ಮೇಕರ್, ಗೀಸರ್ ಮತ್ತು ಮೈಕ್ರೋವೇವ್ ಓವನ್ ಸೇರಿದಂತೆ ಭಾರಿ ವಿದ್ಯುತ್ ಉಪಕರಣಗಳನ್ನು ಪತ್ತೆ ಮಾಡಿದ್ದಾರೆ – ಇವುಗಳಲ್ಲಿ 16,480 ಕಿಲೋವ್ಯಾಟ್ ವಿದ್ಯುತ್ ಲೋಡ್ ಇರುವುದು ಕಂಡುಬಂದಿದೆ. ಸಂಸದರ ನಿವಾಸದಲ್ಲಿ ಕಳೆದ ಆರು ತಿಂಗಳಿಂದ ವಿದ್ಯುತ್ ಬಿಲ್ ಶೂನ್ಯವಾಗಿರುವುದು ಸಹ ಕಂಡು ಬಂದಿದೆ.
ಜಿಲ್ಲಾ ವಿದ್ಯುಚ್ಛಕ್ತಿ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಸಮಾಜವಾದಿ ಸಂಸದರ ವಿರುದ್ಧ ವಿದ್ಯುತ್ ಕಳ್ಳತನ ವಿರೋಧಿ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಸಂಸದರ ಮನೆಯಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ವೇಳೆ ಸಂಸದರ ತಂದೆ ಮಮ್ಲುಕ್ ಉರ್ ರೆಹಮಾನ್ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಾರ್ಕ್ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement