ಆಗ್ರಾದಲ್ಲಿ ಟ್ರಕ್ ಚಾಲಕನೊಬ್ಬ ತನ್ನ ವಾಹನದ ಕೆಳಗೆ ಸಿಲುಕಿದ್ದ ಇಬ್ಬರನ್ನು ಸುಮಾರು 300 ಮೀಟರ್ ವರೆಗೆ ಎಳೆದೊಯ್ದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೆಲ ಸ್ಥಳೀಯರು ಟ್ರಕ್ ಅನ್ನು ಅಡ್ಡಹಾಕಿ ಚಾಲಕ ಬಲವಂತವಾಗಿ ಟ್ರಕ್ ನಿಲ್ಲಿಸುವಂತೆ ಮಾಡಿದ ನಂತರ ವಾಹನದ ಕೆಳಗಿದ್ದವರನ್ನು ಹೊರತೆಗೆಯಲಾಗಿದೆ. ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಆಗ್ರಾದ ನುನ್ಹೈ ನಿವಾಸಿಗಳಾಗಿರುವ ಇಬ್ಬರು ವ್ಯಕ್ತಿಗಳು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ವಾಟರ್‌ವರ್ಕ್ಸ್‌ನಿಂದ ರಾಮ್‌ಬಾಗ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಬ್ಬರು ಟ್ರಕ್‌ನ ಮುಂದಿನ ಚಕ್ರದ ಕೆಳಗೆ ಸಿಲುಕಿದ್ದರೂ ಚಾಲಕ ಟ್ರಕ್ ಅನ್ನು ನಿಲ್ಲಿಸುವ ಬದಲು ವೇಗವಾಗಿ ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಅಪಘಾತದಲ್ಲಿ ಇಬ್ಬರು ಯುವಕರನ್ನು ಕ್ಯಾಂಟರ್ ಚಾಲಕ ಸುಮಾರು 300 ಮೀಟರ್ ಎಳೆದೊಯ್ದಿದ್ದಾನೆ. ನಂತರ ಕೆಲವು ನಿವಾಸಿಗಳು ಚಾಲಕನನ್ನು ಬಲವಂತವಾಗಿ ನಿಲ್ಲಿಸಿ ಯುವಕರನ್ನು ರಕ್ಷಿಸಿದರು” ಎಂದು ಛಟ್ಟಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಮೋದಕುಮಾರ ತಿಳಿಸಿದ್ದಾರೆ.
“ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ, ಆದರೆ ಸ್ಥಿತಿ ಸ್ಥಿರವಾಗಿದೆ. ಯುವಕರು ಆಗ್ರಾದವರು, ಘಟನೆಯ ನಂತರ ಕ್ಯಾಂಟರ್ ಚಾಲಕನನ್ನು ಬಂಧಿಸಿ ಕ್ಯಾಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಅವರು ಹೇಳಿದರು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟ್ರಕ್ ಕೆಳಗೆ ಸಿಲುಕಿರುವ ಇಬ್ಬರು ಸಹಾಯಕ್ಕಾಗಿ ಕೂಗುತ್ತಿರುವುದು ಕಂಡುಬಂದಿದೆ. ಆದರೆ ಟ್ರಕ್ ಚಾಲಕ ವೇಗವನ್ನು ಹೆಚ್ಚಿಸಿದ್ದಾನೆ. ಜಾಕಿರ್ ಎಂದು ಗುರುತಿಸಲಾದ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನಿಗೆ ಸಹಾಯ ಮಾಡುವಂತೆ ಸನ್ನೆ ಮಾಡಿದ್ದಾನೆ. ಚಲಿಸುತ್ತಿದ್ದ ಟ್ರಕ್ ಅಡಿಯಲ್ಲಿ ಮತ್ತೋರ್ವ ವ್ಯಕ್ತಿ ಸಿಲುಕಿಕೊಂಡಿದ್ದಾನೆ.
ನಾವು ತುಂಬಾ ಕಿರುಚಿದೆವು, ಆದರೂ ಆತ ಟ್ರಕ್ ನಿಲ್ಲಿಸಲಿಲ್ಲ ಮತ್ತು ನಮ್ಮನ್ನು ಎಳೆದುಕೊಂಡು ಹೋದ ಎಂದು ಟ್ರಕ್ ಕೆಳಗೆ ಸಿಲುಕಿದವರಲ್ಲಿ ಒಬ್ಬನಾದ ಗಾಯಗೊಂಡು ಆಸ್ಪತ್ರೆಯಲ್ಲಿರುವ ಜಾಕೀರ್ ಎಂಬವರು ಹೇಳಿದ್ದಾರೆ.
“ನಾವು ಊಟ ಮುಗಿಸಿ ಮನೆಗೆ ಮರಳುತ್ತಿದ್ದೆವು. ನಾವು ಟ್ರಕ್ ದಾಟಿ ಮುಂದೆ ಸಾಗಿದ ತಕ್ಷಣ ಅದು ನಮಗೆ ಡಿಕ್ಕಿ ಹೊಡೆದಿದೆ. ನಮ್ಮ ಬೈಕ್ ಅದರ ಕೆಳಗೆ ಸಿಲುಕಿಕೊಂಡಿತು ಮತ್ತು ನಾವು ಸಹ ಟ್ರಕ್ ಕೆಳಗೆ ಸಿಲುಕಿಕೊಂಡೆವು” ಎಂದು ಆಗ್ರಾದ ನುನ್ಹೈ ನಿವಾಸಿ ಜಾಕೀರ್ ಹೇಳಿದರು.
ಹೆದ್ದಾರಿಯಲ್ಲಿದ್ದ ಇತರ ವಾಹನ ಸವಾರರು ಇದನ್ನು ನೋಡಿ ಟ್ರಕ್ ಅನ್ನು ಹಿಂದಿಕ್ಕಿ ಅದನ್ನು ನಿಲ್ಲಿಸಿದ್ದಾರೆ. ನಂತರ ಅಲ್ಲಿ ಸೇರಿದ್ದ ಸಣ್ಣ ಗುಂಪು ಚಾಲಕನನ್ನು ಥಳಿಸಿದೆ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನಸಮೂಹವು ಕೆಳಗೆ ಸಿಕ್ಕಿಬಿದ್ದ ಜನರನ್ನು ಹೊರತೆಗೆಯಲು ಟ್ರಕ್ ಅನ್ನು ತಳ್ಳುತ್ತಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ರಕ್ತಸಿಕ್ತವಾದ ನೆಲವನ್ನು ಸಹ ಕಾಣಬಹುದು. ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ