ನವದೆಹಲಿ : ಲೂಟಿಕೋರ ವಧು ಎಂದು ಪೊಲೀಸರು ಬಣ್ಣಿಸಿರುವ ಮಹಿಳೆಯೊಬ್ಬಳು ದಶಕಕ್ಕೂ ಹೆಚ್ಚು ಕಾಲ ಅನೇಕರನ್ನು ಮದುವೆಯಾಗಿ ಸೆಟಲ್ ಮೆಂಟ್ ಹೆಸರಿನಲ್ಲಿ ಒಟ್ಟು ₹ 1.25 ಕೋಟಿ ವಸೂಲಿ ಮಾಡಿದ್ದು, ಈಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.
ಉತ್ತರಾಖಂಡ ನಿವಾಸಿಯಾಗಿರುವ ಸೀಮಾ ಉರುಫ್ ನಿಕ್ಕಿ ಎಂಬಾಕೆ 2013ರಲ್ಲಿ ಮೊದಲು ಆಗ್ರಾದ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದಳು. ಕೆಲ ಸಮಯದ ಬಳಿಕ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದ್ದಳು. ನಂತರ ಪ್ರಕರಣ ಇತ್ಯರ್ಥಪಡಿಸಲು ರಾಜಿ ಸಂಧಾನದ ಭಾಗವಾಗಿ ₹ 75 ಲಕ್ಷ ಪಡೆದಿದ್ದಳು.
ನಂತರ 2017 ರಲ್ಲಿ ಸೀಮಾ ಗುರುಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ವಿವಾಹವಾದಳು. ನಂತರ ಆ ವ್ಯಕ್ತಿಯಿಂದಲೂ ಬೇರ್ಪಟ್ಟಳು. ಹಾಗೂ ₹ 10 ಲಕ್ಷವನ್ನು ಸೆಟಲ್‌ಮೆಂಟ್ ಆಗಿ ತೆಗೆದುಕೊಂಡಳು.
ನಂತರ ಆಕೆ 2023 ರಲ್ಲಿ ಜೈಪುರ ಮೂಲದ ಉದ್ಯಮಿಯನ್ನು ವಿವಾಹವಾದಳು. ಆದರೆ ನಂತರ ₹ 36 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಅವರ ಮನೆಯಿಂದ ಪರಾರಿಯಾಗಿದ್ದಳು. ಕುಟುಂಬದವರು ಪ್ರಕರಣ ದಾಖಲಿಸಿದ ನಂತರ ಜೈಪುರ ಪೊಲೀಸರು ಸೀಮಾಳನ್ನು ಬಂಧಿಸಿದ್ದಾರೆ.
ಸೀಮಾ ತಾನು ಮಾದುವೆಯಾಗಿ ವಂಚಿಸಲು ಟಾರ್ಗೆಟ್ ಮಾಡುವ ಗಂಡುಗಳನ್ನು ವಿವಾಹ ಸೈಟ್‌ಗಳಲ್ಲಿ ಹುಡುಕುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಅವಳು ಹೆಚ್ಚಾಗಿ ವಿಚ್ಛೇದನ ಪಡೆದ ಅಥವಾ ಹೆಂಡತಿ ಕಳೆದುಕೊಂಡವರನ್ನೇ ಗುರುಯಾಗಿಸಿಕೊಳ್ಳುತ್ತಿದ್ದಳು. ಆಕೆ ಬೇರೆ ಬೇರೆ ರಾಜ್ಯಗಳಲ್ಲಿ ಮದುವೆಯಾಗಿ ವಿವಿಧ ಪ್ರಕರಣಗಳಲ್ಲಿ ಒಟ್ಟು ₹ 1.25 ಕೋಟಿ ಹಣ ವಸೂಲಿ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ