ನವದೆಹಲಿ: ದೆಹಲಿಯ ಸಂಸತ್ ಭವನದ (Parliament Building) ಬಳಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ತಕ್ಷಣವೇ ರೈಲ್ವೆ ಪೊಲೀಸ್, ಅಲ್ಲಿದ್ದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇ.95 ರಷ್ಟು ದೇಹ ಸುಟ್ಟುಹೋಗಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, ರೈಲ್ವೆ ಭವನದ ಬಳಿಯ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಸಂಸತ್ ಭವನದ ಕಡೆಗೆ ಓಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಭವನ ಸಂಸತ್ತಿನ ಕಟ್ಟಡದ ಎದುರು ಇದೆ.
ವ್ಯಕ್ತಿಯ ಬಳಿಯಿಂದ ಭಾಗಶಃ ಸುಟ್ಟು ಹೋಗಿರುವ 2 ಪುಟಗಳ ಪತ್ರವೊಂದನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವ್ಯಕ್ತಿ ಸಂಸತ್ ಭವನದ ಹತ್ತಿರ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಪೆಟ್ರೋಲ್ ಬಾಟಲಿ ಮತ್ತು ಅರ್ಧ ಸುಟ್ಟು ಹೋದ ನೋಟು ಸಿಕ್ಕಿದ್ದು, ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ದೆಹಲಿ ಪೊಲೀಸರು ಮತ್ತು ವಿಧಿವಿಜ್ಞಾನ ತಂಡದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗ್‌ಪತ್‌ನಲ್ಲಿ ಮತ್ತೊಂದು ಕುಟುಂಬದ ಜೊತೆ ಈ ವ್ಯಕ್ತಿಯ ಕುಟುಂಬ ಜಗಳವಾಡಿದ್ದು, ನಂತರ ಎರಡೂ ಕಡೆಯವರು ಜೈಲು ಸೇರಿದ್ದರು. ಇದರಿಂದ ಮನನೊಂದ ಜಿತೇಂದ್ರ, ಬುಧವಾರ ಮಧ್ಯಾಹ್ನ ರೈಲಿನಲ್ಲಿ ದೆಹಲಿಗೆ ಬಂದು ರೈಲ್ವೇ ಭವನದ ವೃತ್ತಕ್ಕೆ ಬಂದು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ