ಸರ್ಕಾರಿ ನೌಕರನ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವು ದುರಂತವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಲುವಾಗಿ ಸ್ವಯಂ ನಿವೃತ್ತಿ ಪಡೆದ ನಂತರ ನೌಕರನಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದ ಪತ್ನಿ ಅವರ ಕಣ್ಣೆದುರೇ ಸಾವಿಗೀಡಾಗಿದ್ದಾಳೆ…!
ರಾಜಸ್ಥಾನದ ಕೋಟಾದಲ್ಲಿ ನಡೆದ ಘಟನೆಯ ಮನಕಲಕುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಪತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಪತಿ-ಪತ್ನಿಯರಿಬ್ಬರಿಗೂ ಮಾಲೆ ಹಾಕಿದ್ದು, ಟೇಬಲ್‌ಗೆ ಗುಲಾಬಿಯ ದಳಗಳನ್ನು ಹಚ್ಚಿ ಅಲಂಕಾರ ಮಾಡಲಾಗಿತ್ತು. ಎಲ್ಲರ ಮುಖದಲ್ಲಿಯೂ ಸಂತಸ ಮನೆ ಮಾಡಿತ್ತು. ಆದರೆ, ಸಂತೋಷದ ಕ್ಷಣಗಳು ಹೆಂಡತಿಯ ಸಾವಿನೊಂದಿಗೆ ದುರಂತವಾಗಿ ಬದಲಾಗುತ್ತವೆ ಎಂದು ಅಲ್ಲಿದ್ದ ಯಾರಿಗೂ ತಿಳಿದಿರಲಿಲ್ಲ.
ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪತಿ ದೇವೇಂದ್ರ ಸ್ಯಾಂಡಲ್ ಎಂಬವರು ಹೃದ್ರೋಗಿಯಾಗಿದ್ದ ತಮ್ಮ ಪತ್ನಿ ಟೀನಾ ಅವರನ್ನು ನೋಡಿಕೊಳ್ಳಲು ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ಇದಕ್ಕಾಗಿ ಕಚೇರಿ ಸಿಬ್ಬಂದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪತ್ನಿ ಟೀನಾ ತನ್ನ ಪತಿಗೆ “ಮುಝೆ ಚಕ್ಕರ್ ಆ ರಹೇ ಹೈ (ನನಗೆ ತಲೆತಿರುಗುತ್ತಿದೆ)” ಎಂದು ಹೇಳುತ್ತಾಳೆ. ಆಗ ಗಂಡ ಅವಳನ್ನು ಕುರ್ಚಿಯ ಮೇಲೆ ಮತ್ತೆ ಕುಳ್ಳಿರಿಸಿ ಅವಳ ಬೆನ್ನಿಗೆ ಮಸಾಜ್ ಮಾಡಿದ್ದಾನೆ. ಸೇರಿದ್ದ ಇತರರು ದಯವಿಟ್ಟು ಸ್ವಲ್ಪ ನೀರು ತನ್ನಿ ಎಂದು ಹೇಳುವುದು ವೀಡಿಯೊದಲ್ಲಿ ಕೇಳುತ್ತದೆ.
ನಂತರ ಕ್ಯಾಮರಾಗಳಿಗಾಗಿ ಆಕೆ ಕಿರುನಗೆ ಬೀರಲು ಪ್ರಯತ್ನಿಸುವಂತೆ ಕಾಣುತ್ತದೆ, ಆದರೆ ಅವಳು ಅಸ್ಥಿರವಾಗಿ ತೂಗಾಡಿ ನಂತರ ಸ್ತಬ್ದವಾಗಿದ್ದಾಳೆ. ಮೇಜಿನ ಮುಂದೆ ಕುಸಿಯುತ್ತಾಳೆ. ಪತಿ ಅವಳನ್ನು ಸರಿಯಾಗಿ ಕೂಡ್ರಿಸಲು ಎಷ್ಟೇ ಪ್ರಯತ್ನಿಸಿದರೂ ಆಕೆ ಕುಸಿದುಬಿದ್ದಿದ್ದಾಳೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಆದರೆ ಆಕೆಯ ಪತಿಯ ಬೀಳ್ಕೊಡುಗೆಯ ದಿನವೇ ಅದೇ ಕಾರ್ಯಕ್ರಮದಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಯಿತು.
ನಿಮ್ಮ ಕಾಮೆಂಟ್ ಬರೆಯಿರಿ