ನವದೆಹಲಿ : ಒಬ್ಬಂಟಿ ಪುರುಷರನ್ನು ಮದುವೆಯಾಗಿ ನಂತರ ಅವರ ಮನೆಯಿಂದ ಹಣ ಮತ್ತು ಚಿನ್ನಾಭರಣ ಕದಿಯುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ.
ಇಬ್ಬರು ಮಹಿಳೆಯರಲ್ಲಿ, ಪೂನಂ ವಧುವಿನಂತೆ ಪೋಸ್ ಕೊಡುತ್ತಿದ್ದರೆ ಇನ್ನೊಬ್ಬಳು ಸಂಜನಾ ಗುಪ್ತಾ ಎಂಬವಳು ತಾಯಿಯಂತೆ ಪೋಸ್ ನೀಡುತ್ತಿದ್ದಳು. ವಿಮಲೇಶ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಒಬ್ಬಂಟಿ ಪುರುಷರನ್ನು ಗುರುತಿಸಿ ಅವರನ್ನು ಪೂನಂಗೆ ಪರಿಚಯಿಸುತ್ತಿದ್ದರು. ಮದುವೆ ಹೊಂದಿಸಿಕೊಟ್ಟಿದ್ದಕ್ಕೆ ಹಣ ನೀಡುವಂತೆ ತಾವು ಟಾರ್ಗೆಟ್ ಮಾಡುತ್ತಿದ್ದ ಒಬ್ಬಂಟಿ ಪುರುಷರ ಕೇಳುತ್ತಿದ್ದರು ಎನ್ನಲಾಗಿದೆ.
ನ್ಯಾಯಾಲಯದಲ್ಲಿ ಸರಳ ವಿವಾಹ ನಡೆದ ನಂತರ, ಪೂನಂ ವರನ ಮನೆಗೆ ತೆರಳಿ ಅಲ್ಲಿ ಆಭರಣ ಮತ್ತು ಹಣವನ್ನು ಕದ್ದು ಪರಾರಿಯಾಗುತ್ತಿದ್ದಳು. ಪೊಲೀಸರ ಪ್ರಕಾರ, ಗ್ಯಾಂಗ್ನ ಏಳನೇ ಟಾರ್ಗೆಟ್ ಆಗಿದ್ದ ದೂರುದಾರ ಶಂಕರ ಉಪಾಧ್ಯಾಯ ಎಂಬವರನ್ನು ತಮ್ಮ ದಾಳಕ್ಕೆ ಸಿಲುಕಿಸಲು ಪ್ರಯತ್ನಿಸಿದಾಗ ಸಿಕ್ಕಿಬಿದ್ದಿದ್ದಾರೆ. ಇದಕ್ಕೂ ಮೊದಲು ಗ್ಯಾಂಗ್ ಅಂತಹ ಆರು ಜನರನ್ನು ಮದುವೆ ನೆಪದಲ್ಲಿ ಮೋಸ ಮಾಡಿ, ಚಿನ್ನಾಭರಣ ಕದ್ದು ಪರಾರಿಯಾಗಿತ್ತು.
ಪೊಲೀಸ್ ದೂರು ನೀಡಿದ ಶಂಕರ ಉಪಾಧ್ಯಾಯ ಅವರು ಒಬ್ಬಂಟಿಯಾಗಿದ್ದರು ಹಾಗೂ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದರು. ವಿಮಲೇಶ ಎಂಬಾತ ಅವರ ಬಳಿಗೆ ಬಂದು ಮದುವೆ ಮಾಡಿಸುವುದಾಗಿ ಹೇಳಿದ್ದಾನೆ. ಆದರೆ ಅದಕ್ಕೆ ಸುಮಾರು 1.5 ಲಕ್ಷ ರೂ.ನೀಡಬೇಕಾಗುತ್ತದೆ ಎಂದು ಹೇಳಿದ್ದಾನೆ. ಇದಕ್ಕೆ ಉಪಾಧ್ಯ ಅವರು ಒಪ್ಪಿಕೊಂಡಿದ್ದರು.
ಶನಿವಾರ, ವಿಮಲೇಶ ಎಂಬಾತ ಉಪಾಧ್ಯಾಯ ಅವರನ್ನು ನ್ಯಾಯಾಲಯಕ್ಕೆ ಬರಲು ಹೇಳಿದ್ದಾನೆ ಹಾಗೂ ಅಲ್ಲಿ ಪೂನಂ ಎಂಬ ಯುವತಿಯನ್ನು ಪರಿಚಯಿಸಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ. ನಂತರ 1.5 ಲಕ್ಷ ರೂ. ಹಣ ಕೇಳಿದರು. ಆಗ ತನಗೆ ಇವರ ಬಗ್ಗೆ ಸಣ್ಣ ಅನುಮಾನ ಬಂದಿದೆ. ಹೀಗಾಗಿ ಅವರು ಪೂನಂ ಮತ್ತು ಅವಳ ತಾಯಿಯಂತೆ ಪೋಸ್ ನೀಡಿದ ಸಂಜನಾ ಅವರ ಆಧಾರ್ ಕಾರ್ಡ್ಗಳನ್ನು ತೋರಿಸಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
“ಅವರ ಹಾವಭಾವದಿಂದ ಅವರು ನನ್ನನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ಅನುಮಾನ ಬಂತು. ನಾನು ಮದುವೆಯಾಗಲು ನಿರಾಕರಿಸಿದಾಗ, ಅವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಮತ್ತು ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಹೆದರಿಸಿದರು. ನಾನು ಯೋಚಿಸಲು ಸಮಯ ಬೇಕು ಎಂದು ಹೇಳಿ ಅಲ್ಲಿಂದ ಹೊರಟುಹೋದೆ” ಎಂದು ಉಪಾಧ್ಯಾಯ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. .
ಆರೋಪಿಗಳು ಮದುವೆಯ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಬಗ್ಗೆ ದೂರು ಬಂದಿರುವುದಾಗಿ ಬಂದಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ ತಿಳಿಸಿದ್ದಾರೆ. “ನಾವು ತಕ್ಷಣ ನಮ್ಮ ತಂಡಗಳಿಗೆ ಸೂಚನೆ ನೀಡಿದ್ದೇವೆ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದೇವೆ. ಇವರು ಒಬ್ಬಂಟಿ ಪುರುಷರನ್ನು ಮದುವೆಯಾಗಿ ಅವರನ್ನು ನಂತರ ವಂಚಿಸುತ್ತಿದ್ದರು ಮತ್ತು ನಂತರ ಆಭರಣಗಳು ಮತ್ತು ನಗದು ಕದಿಯುತ್ತಿದ್ದರು ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ