ವೀಡಿಯೊ..| ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಪಂಚಭೂತಗಳಲ್ಲಿ ಲೀನ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ಇಂದು, ಶನಿವಾರ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಕೆಂಪು ಕೋಟೆಯ ಹಿಂಭಾಗದಲ್ಲಿರುವ ನಿಗಮ್‌ಬೋಧ್‌ಘಾಟ್‌ನಲ್ಲಿ ಸಿಖ್‌ ಸಂಪ್ರದಾಯ ಪ್ರಕಾರ ಮನಮೋಹನ್‌ ಸಿಂಗ್‌ ಅವರ ಅಂತ್ಯಕ್ರಿಯೆ ನಡೆಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ ಧನಕರ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಸಚಿವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಅಲ್ಲದೆ, ಭೂತಾನ್ ಪ್ರಧಾನಿ ಶೇರಿಂಗ್ ತೊಬ್ಗೇ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಮೊದಲಾದವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 9.30ರವರೆಗೆ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಇಡಲಾಗಿತ್ತು. ನಂತರ ನಿಗಮಬೋಧ್‌ ಘಾಟ್‌ವರೆಗೆ ಅಂತಿಮ ಯಾತ್ರೆ ನಡೆಸಲಾಯಿತು. ನಿಗಮಬೋಧ್‌ ಘಾಟ್‌ನಲ್ಲಿ ಅವರ ಪಾರ್ಥೀವ ಶರೀರಕ್ಕೆ ಮೂರು ಸೇನೆಗಳು ಅಗಲಿದ ದಿಗ್ಗಜನಿಗೆ ಗೌರವ ನಮನ ಸಲ್ಲಿಸಿದವು.
ಮನಮೋಹನ ಸಿಂಗ್‌ ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದು, ಅವರು ಶುಕ್ರವಾರ ಆಗಮಿಸಿದ್ದರು. ಅವರ ಅಂತ್ಯಕ್ರಿಯೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಸರ್ಕಾರವೂ ಭಾಗಿಯಾಗಿದೆ.
ಅವರಿಗೆ ಗೌರವ ಸೂಚಕವಾಗಿ ಕೇಂದ್ರವು ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ ಭಾರತದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಮುಂದಿನ ಏಳು ದಿನಗಳ ಕಾಲ ಸಂಸ್ಥಾಪನಾ ದಿನಾಚರಣೆ ಸೇರಿದಂತೆ ಪಕ್ಷದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.

ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ 92 ನೇ ವಯಸ್ಸಿನಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ‘ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ’ ಎಂದು ಕರೆಯಲ್ಪಡುವ ಡಾ. ಸಿಂಗ್ ಅವರು 2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದಲ್ಲಿ ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದರು.
1932 ರಲ್ಲಿ ಜನಿಸಿದ ಡಾ. ಸಿಂಗ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು, ಅಲ್ಲಿ ಅವರು 1957 ರಲ್ಲಿ ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆ ಗೌರವ ಪದವಿಯನ್ನು ಗಳಿಸಿದರು. ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನಫೀಲ್ಡ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಸಹ ಪಡೆದರು. ಡಾ ಸಿಂಗ್ ಅವರು 1991 ರಲ್ಲಿ ರಾಜ್ಯಸಭೆಯ ಸದಸ್ಯರಾದರು ಮತ್ತು 1998 ಮತ್ತು 2004 ರ ನಡುವೆ ವಿಪಕ್ಷದ ನಾಯಕರಾಗಿದ್ದರು. ಅವರಿಗೆ 1987 ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣವನ್ನು ನೀಡಲಾಯಿತು.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement