ಹೊನ್ನಾವರ | ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

ಹೊನ್ನಾವರ: ಬೆಂಗಳೂರಿನಿಂದ ಗೋಕರ್ಣಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಾಳೆಗದ್ದೆ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ.
ತಾಲೂಕಿನ ಬಾಳೆಗದ್ದೆ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಶನಿವಾರ ಬೆಳಿಗ್ಗೆ ಖಾಸಗಿ ಪ್ರವಾಸಿ ಬಸ್ ಪಲ್ಟಿಯಾಗಿದ್ದು, ಬಸ್‌ನಲ್ಲಿ ಒಟ್ಟು 20 ಮಂದಿ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ. ಅದರಲ್ಲಿ ಎಂಟು ಜನರು ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲ, ಮಂಗಳೂರು ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಉಳಿದವರಿಗೆ ಹೊನ್ನಾವರದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು. ಚಾಲಕನೂ ಸೇರಿದಂತೆ 22 ಪ್ರಯಾಣಿಕರಿದ್ದರು. ಮೂವರು ಮಾತ್ರ ಬೆಂಗಳೂರಿನವವರು. ಉಳಿದವರು ಬೇರೆ ಬೇರೆ ರಾಜ್ಯದವರಾಗಿದ್ದು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದವರು ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಪಿಎಸ್‌ಐ ಮಂಜುನಾಥ ನೇತೃತ್ವದ ಪೊಲೀಸರು ಪಲ್ಟಿಯಾದ ಬಸ್‌ನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ. ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement