
ಬೆಳಗಾವಿ : ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗರ್ಭಿಣಿ ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ರಾಧಿಕಾ ಮಲ್ಲೇಶ ಗಡ್ಡಿಹೊಳಿ (19) ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದು ವಿಷ ಸೇವಿಸಿ ಪತಿಯೂ ಆತ್ಮಹತ್ಯೆಗೆ ಯತ್ನಸಿರುವ ಘಟನೆ ನಡೆದಿದೆ. ಮಲ್ಲೇಶ (25) ಆತ್ಮಹತ್ಯೆಗೆ ಯತ್ನಿಸಿದ ರಾಧಿಕಾ ಪತಿ. ಸದ್ಯ ಅವರಿಗೆ ಕಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗರ್ಭಿಣಿಯಾಗಿದ್ದ ರಾಧಿಕಾ ಅವರು ಆರು ಬಾರಿ ಫಿಟ್ಸ್‌ಗೆ ಒಳಗಾಗಿದ್ದರು. ಇವರ ಗರ್ಭಕೋಶದಲ್ಲಿಯೇ 8 ತಿಂಗಳ ಮಗು ಸಾವಿಗೀಡಾಗಿತ್ತು. ಸೋಮವಾರ ಅವರನ್ನು ಬೆಳಗಾವಿಯ ಬಿಮ್ಸ್‌ನಿಂದ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಫಿಟ್ಸ್ ಬಂದು ಅವರಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿರಲಿಲ್ಲ. ಅವರನ್ನು ಬೆಳಗಾವಿಯ ಬಿಮ್ಸ್ಗೆ ಕರೆದುಕೊಂಡು ಬರುವಷ್ಟರಲ್ಲಿ ಶಿಶು ಗರ್ಭಿಣಿಯ ಹೊಟ್ಟೆಯಲ್ಲೇ ಮೃತಪಟ್ಟಿತ್ತು. ರಾಧಿಕಾ ಸ್ಥಿತಿಯೂ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಬಿಮ್ಸ್ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ರಾಧಿಕಾ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ