ಅಮೆರಿಕದ ನ್ಯೂ ಓರ್ಲಿಯನ್ಸ್‌ನ ಬೌರ್ಬನ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದ ಜನಸಂದಣಿಯ ಮೇಲೆ ಟ್ರಕ್ ನುಗ್ಗಿಸಿ ವಿಧ್ವಂಸಕ ಕೃತ್ಯ ಎಸಗಿದ ಘಟನೆಯಲ್ಲಿ ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಮತ್ತು 35 ಜನರು ಗಾಯಗೊಂಡಿದ್ದಾರೆ.
ಇದಕ್ಕೆ ಕಾರಣನಾದ ಶಂಕಿತನನ್ನು ಗುರುತಿಸಲಾಗಿದ್ದು, ಈತ ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದ ಅಮೆರಿಕದ ಮಾಜಿ ಸೈನಿಕ ಎನ್ನಲಾಗಿದೆ. ಅಲ್ಲದೆ, ಆತ ಓಡಿಸಿಕೊಂಡು ಬಂದ ಟ್ರಕ್‌ನಲ್ಲಿ ಐಸಿಸ್ ಧ್ವಜವಿತ್ತು. ಆತ ಬೇರೆಯವರ ಸಹಾಯದಿಂದ ಈ ಹತ್ಯಾಕಾಂಡವನ್ನು ನಡೆಸಿರಬಹುದು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಹೇಳಿದೆ. ಎಫ್‌ಬಿಐ ಇದನ್ನು ಭಯೋತ್ಪಾದಕ ದಾಳಿ ಎಂದೇ ತನಿಖೆ ನಡೆಸುತ್ತಿದೆ.
ಶಂಕಿತ ಭಯೋತ್ಪಾದಕ ಶಂಸುದ್-ದಿನ್ ಜಬ್ಬಾರ್ ಹೊಸ ವರ್ಷದ ದಿನದಂದು ನ್ಯೂ ಓರ್ಲಿಯನ್ಸ್‌ನಲ್ಲಿ ತುಂಬಿ ತುಳುಕುತ್ತಿದ್ದ ಬೌರ್ಬನ್ ಸ್ಟ್ರೀಟ್‌ನಲ್ಲಿ ತನ್ನ ಪಿಕಪ್ ಟ್ರಕ್ ಅನ್ನು ನುಗ್ಗಿಸಿದ ಭದ್ರತಾ ಕ್ಯಾಮರಾ ವೀಡಿಯೊಗಳು ಸಹ ಹೊರಹೊಮ್ಮಿವೆ. ಮತ್ತೊಂದು ವೀಡಿಯೊದಲ್ಲಿ, ಹೊಸ ವರ್ಷದ ದಿನದಂದು ಜನಸಂದಣಿಯಿಂದ ತುಂಬಿರುವ ಫ್ರೆಂಚ್ ಕ್ವಾರ್ಟರ್‌ನಲ್ಲಿ ಬಿಳಿ ಫೋರ್ಡ್ ಪಿಕಪ್ ಟ್ರಕ್ ವೇಗವಾಗಿ ಚಲಿಸುತ್ತಿರುವುದನ್ನು ಕಾಣಬಹುದು, ಅಲ್ಲಿ ಹಲವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಹರಸಾಹಸ ಪಡುವುದನ್ನು ಕಾಣಬಹುದು.
ದಾಳಿಕೋರ, ಶಂಸುದ್-ದಿನ್ ಜಬ್ಬಾರ್, ಬುಧವಾರ ಜನಸಮೂಹದ ಮೇಲೆ ಟ್ರಕ್ ನುಗ್ಗಿಸಿ ನಂತರ ಅವರತ್ತ ಗುಂಡು ಹಾರಿಸಿದ್ದಾನೆ. ಇದರಿಂದ 15 ಮಂದಿ ಸಾವಿಗೀಡಾದರು ಹಾಗೂ ಮತ್ತು ಕನಿಷ್ಠ 35 ಜನರು ಗಾಯಗೊಂಡರು. ಘಟನೆಯ ನಂತರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಆತ ಕೊಲ್ಲಲ್ಪಟ್ಟಿದ್ದಾನೆ.
ತನಿಖಾಧಿಕಾರಿಗಳಿಗೆ ಆತನ ವಾಹನದಲ್ಲಿ ಬಂದೂಕುಗಳು ಮತ್ತು ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾಗಿವೆ. ವಾಹನದ ಟ್ರೇಲರ್ ಹಿಚ್‌ನಲ್ಲಿ ಐಸಿಸ್ ಧ್ವಜ ಪತ್ತೆಯಾಗಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ದಾಳಿಯ ಮಾಡುವ ಕೆಲವು ಗಂಟೆಗಳ ಮೊದಲು ದಾಳಿಕೋರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊಗಳನ್ನು ಎಫ್‌ಬಿಐ ಪತ್ತೆ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ, ಅದರಲ್ಲಿ ಆತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾನೆ ಮತ್ತು ಜನರನ್ನು ಕೊಲ್ಲುಬ ಬಗ್ಗೆ ಮಾತನಾಡಿದ್ದಾನೆ. ಅಮೆರಿಕದ ಬ್ರಾಡ್‌ಕಾಸ್ಟರ್ ಸಿಎನ್‌ಎನ್, ಅ ಶಂಕಿತ ವ್ಯಕ್ತಿ ಐಸಿಸ್‌ಗೆ ಸೇರುವ ಕನಸುಗಳ ಬಗ್ಗೆ ಉಲ್ಲೇಖಿಸಿದ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತಿಳಿಸಿದೆ. 15 ಜನರ ಸಾವಿಗೆ ಕಾರಣವಾದ ದಾಳಿಯ ಗಂಟೆಗಳ ಮೊದಲು ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ವೀಡಿಯೊದಲ್ಲಿ ಕತ್ತಲೆಯಿಂದಾಗಿ ಅಸ್ಪಷ್ಟವಾಗಿ ಕಾಣುವ ಶಂಕಿತ ತನ್ನ ವಿಚ್ಛೇದನದ ಬಗ್ಗೆಯೂ ಮಾತನಾಡಿದ್ದಾನೆ ಮತ್ತು ಕುಟುಂಬವನ್ನು ಕೊಲ್ಲುವ ಉದ್ದೇಶದಿಂದ “ಹೊಸ ವರ್ಷದ ಆಚರಣೆ” ಹೆಸರಿನಲ್ಲಿ ತನ್ನ ಕುಟುಂಬವನ್ನು ಒಟ್ಟುಗೂಡಿಸಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.
42 ವರ್ಷದ ಜಬ್ಬಾರ್ ದಾಳಿಯನ್ನು ನಡೆಸಲು ಇತರರ ಸಹಾಯವನ್ನು ಪಡೆದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಏಕೆಂದರೆ ಪ್ರವಾಸಿಗರನ್ನು ಸೆಳೆಯುವ ಫ್ರೆಂಚ್ ಕ್ವಾರ್ಟರ್‌ನಲ್ಲಿ ಮೂರು ಸುಧಾರಿತ ಪೈಪ್ ಬಾಂಬ್‌ಗಳು ಜಬ್ಬಾರ್ ಅವರ ಟ್ರಕ್‌ನಲ್ಲಿ ಒಂದು ಸೇರಿದಂತೆ ಕಂಡುಬಂದಿವೆ.”ಜಬ್ಬಾರ್ ಮಾತ್ರ ಇದರಲ್ಲಿ ಪಾಲ್ಗೊಂಡಿದ್ದಾನೆ ಎಂದು ನಾವು ನಂಬುವುದಿಲ್ಲ. ಆತನ ಪರಿಚಿತ ಸಹಚರರು ಸೇರಿದಂತೆ ನಾವು ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ” ಎಂದು ಎಫ್‌ಬಿಐ (FBI )ಅಧಿಕಾರಿಯೊಬ್ಬರು ವರದಿಗಾರರಿಗೆ ತಿಳಿಸಿದರು.
ಸಾರ್ವಜನಿಕ ದಾಖಲೆಗಳ ಪ್ರಕಾರ, ಜಬ್ಬಾರ್ ಹೂಸ್ಟನ್‌ನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ. ವೀಡಿಯೊವೊಂದರಲ್ಲಿ, ಆತ ಹೂಸ್ಟನ್‌ನಿಂದ ಪೂರ್ವಕ್ಕೆ 130 ಕಿಮೀ ದೂರದಲ್ಲಿರುವ ಬ್ಯೂಮಾಂಟ್‌ನಲ್ಲಿ ಜನಿಸಿದ್ದಾನೆ ಮತ್ತು ಬೆಳೆದಿದ್ದಾನೆ ಎಂದು ಎಂದು ಎಫ್‌ಬಿಐ ಅಧಿಕಾರಿ ವಿವರಿಸಿದರು ಮತ್ತು ಅಮೆರಿಕ ಮಿಲಿಟರಿಯಲ್ಲಿ ಮಾನವ ಸಂಪನ್ಮೂಲ ಮತ್ತು ಐಟಿ ತಜ್ಞನಾಗಿ 10 ವರ್ಷಗಳ ಕೆಲಸ ಮಾಡಿದ್ದಾನೆ ಎಂದು ಹೇಳಿದರು.
ಶಂಕಿತ ಜಬ್ಬಾರ್, ಮಾರ್ಚ್ 2007 ರಿಂದ ಜನವರಿ 2015 ರವರೆಗೆ ಸಾಮಾನ್ಯ ಸೈನಿಕರಾಗಿದ್ದ ಮತ್ತು ನಂತರ ಜನವರಿ 2015 ರಿಂದ ಜುಲೈ 2020 ರವರೆಗೆ ಆರ್ಮಿ ರಿಸರ್ವ್‌ನಲ್ಲಿದ್ದ. ಅವರು ಫೆಬ್ರವರಿ 2009 ರಿಂದ ಜನವರಿ 2010 ರವರೆಗೆ ಅಫ್ಘಾನಿಸ್ತಾನದಲ್ಲಿ ನಿಯೋಜಿಸಲ್ಪಟ್ಟಿದ್ದ ಮತ್ತು ಸೇವೆಯ ಕೊನೆಯಲ್ಲಿ ಸ್ಟಾಫ್ ಸಾರ್ಜೆಂಟ್ ಹುದ್ದೆ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ