ನವದೆಹಲಿ: ಬಿಜೆಪಿ ನಾಯಕ ರಮೇಶ ಬಿಧುರಿ ಅವರು ಭಾನುವಾರ ಅತಿಶಿ ತಮ್ಮ ತಂದೆಯನ್ನು ಬದಲಾಯಿಸಿದ್ದಾರೆ ಎಂದು ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದ ನಂತರ ದೆಹಲಿ ಮುಖ್ಯಮಂತ್ರಿ ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಕಣ್ಣೀರಾದರು.
ರಮೇಶ ಬಿಧುರಿ ತಮ್ಮ ಉಪನಾಮದ (ಅಡ್ಡ ಹೆಸರು) ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅತಿಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಧುರಿ ಅವರು ಅತಿಶಿ ಅವರು ರಾಜಕೀಯ ಲಾಭಕ್ಕಾಗಿ ತಮ್ಮ ಗುರುತನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ವಿವಾದ ಭುಗಿಲೆದ್ದಿದೆ. ರಮೇಶ ಬಿಧುರಿ ಭಾನುವಾರ ಮಾತನಾಡುವಾಗ ದೆಹಲಿ ಮುಖ್ಯಮಂತ್ರಿ ಅತಿಶಿ ತಮ್ಮ ತಂದೆಯನ್ನೇ ಬದಲಾಯಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದರು. ರೋಹಿಣಿಯಲ್ಲಿ ಬಿಜೆಪಿಯ ‘ಪರಿವರ್ತನ ರ್ಯಾಲಿ’ಯಲ್ಲಿ ಮಾತನಾಡಿದ ರಮೇಶ ಬಿಧುರಿ, ದೆಹಲಿ ಮುಖ್ಯಮಂತ್ರಿ ಅತಿಶಿ ತನ್ನ ಉಪನಾಮವನ್ನು “ಮರ್ಲೆನಾ” ಬದಲು “ಸಿಂಗ್” ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಿ ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅತಿಶಿ ನನ್ನ ತಂದೆ ಜೀವನದುದ್ದಕ್ಕೂ ಶಿಕ್ಷಕರಾಗಿದ್ದರು. ಅವರು ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಕಲಿಸಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ ಎಂದು ಹೇಳುತ್ತ ಭಾವುಕರಾದರು.
ತಮ್ಮ ವಿರುದ್ಧ ಸ್ಪರ್ಧಿಸಲಿರುವ ಕಲ್ಕಾಜಿಯ ಬಿಜೆಪಿ ಅಭ್ಯರ್ಥಿ ರಮೇಶ ಬಿಧುರಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅತಿಶಿ, ‘ನಮ್ಮ ರಾಜಕಾರಣ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಹೇಗೆ?, 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ರಮೇಶ ಬಿಧುರಿ ತೋರಿಸಬೇಕು. ಅವರು ತಮ್ಮ ಕೆಲಸವನ್ನು ತೋರಿಸಿ ಮತ ಕೇಳಬೇಕೇ ಹೊರತು ನನ್ನ ತಂದೆಯನ್ನು ನಿಂದಿಸಿ ಅಲ್ಲ” ಎಂದು ಅತಿಶಿ ಹೇಳಿದ್ದಾರೆ.
ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಅತಿಶಿ ಅವರು ಸ್ವಲ್ಪ ಸಮಯದ ಹಿಂದೆ ತಮ್ಮ ಉಪನಾಮವನ್ನು ಕೈಬಿಟ್ಟಿದ್ದಾರೆ.
“ಮರ್ಲೆನಾ (ಅತಿಶಿ ಮೊದಲು ಬಳಸುತ್ತಿದ್ದ ಉಪನಾಮ) ಅವರು ಸಿಂಗ್ ಆಗಿ ತನ್ನ ಹೆಸರನ್ನು ಬದಲಾಯಿಸಿಕೊಂಡರು. ಕೇಜ್ರಿವಾಲ್ ತನ್ನ ಮಕ್ಕಳ ಮೇಲೆ ಪ್ರಮಾಣ ಭ್ರಷ್ಟ ಕಾಂಗ್ರೆಸ್ ಜೊತೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಮರ್ಲೆನಾ ತಂದೆಯನ್ನು ಬದಲಾಯಿಸಿದರು. ಮೊದಲು ಅವರು ಮರ್ಲೆನಾ ಆಗಿದ್ದರು. ಈಗ ಸಿಂಗ್ ಆಗಿದ್ದಾರೆ. ಇದು ಅವರ ಪಾತ್ರ ಎಂದು ಬಿದುರಿ ಆರೋಪಿಸಿದ್ದರು.
ಹಲವಾರು ಭಾರತೀಯ ಸೈನಿಕರ ಸಾವಿಗೆ ಕಾರಣವಾದ ಭಯೋತ್ಪಾದಕ ಅಫ್ಜಲ್ ಗುರುವಿನ ಮರಣದಂಡನೆಯ ವಿರುದ್ಧ ಅತಿಶಿ ಮರ್ಲೆನಾ ಅವರ ಕುಟುಂಬವು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿತ್ತು ಎಂದು ಬಿಧುರಿ ಹೇಳಿದರು. ಅಫ್ಜಲ್ ಗುರುವಿನ ಮರಣದಂಡನೆಗೆ ಕ್ಷಮೆ ಕೋರಿದ ನಾಯಕರನ್ನು ನೀವು ಬೆಂಬಲಿಸುತ್ತೀರಾ ಎಂದು ದೆಹಲಿಯ ಜನರನ್ನು ಪ್ರಶ್ನಿಸಿದರು.
ರಮೇಶ ಬಿಧುರಿ ಭಾನುವಾರ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಿರುದ್ಧ ಟೀಕೆಗಳನ್ನು ಮಾಡಿದ್ದು, ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಕೆನ್ನೆಯಂತೆ ಕ್ಷೇತ್ರದಲ್ಲಿ ಸುಗಮ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಬಿಹಾರದ ರಸ್ತೆಗಳನ್ನು ನಟ-ರಾಜಕಾರಣಿ ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ ರಮೇಶ್ ಬಿಧುರಿ ನಂತರ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡರು. ನಂತರ “ಕೆಲವು ಸಂದರ್ಭಗಳಲ್ಲಿ ನಾನು ನೀಡಿದ ಹೇಳಿಕೆಯನ್ನು ಆಧರಿಸಿ ಕೆಲವರು ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶವಲ್ಲ. ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು.
ಏತನ್ಮಧ್ಯೆ, ದೆಹಲಿ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬಿಜೆಪಿ ನಾಯಕ ರಮೇಶ್ ಬಿಧುರಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ