ಬೀದರ : ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಶುಕ್ರವಾರ ಐವರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಎಂದು ಹೇಳಲಾಗುತ್ತಿರುವ ರಾಜು ಕಪನೂರು ಸೇರಿದಂತೆ ಒಟ್ಟು ಎಂಟು ಜನರ ಹೆಸರನ್ನು ಉಲ್ಲೇಖಿಸಿದ್ದರು. ಈ ಸಂಬಂಧ ಅಧಿಕಾರಿಗಳು ಬೀದರಿನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರು, ಗೋರಕನಾಥ, ನಂದಕುಮಾರ ನಾಗಬುಜಂಗಿ, ರಾಮನಗೌಡಾ ಪಾಟೀಲ, ಸತೀಶ ಎಂಬವರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆಗಾಗಿ ಬೀದರಿಗೆ ಬಂದಿರುವ ಸಿಐಡಿ ಅಧಿಕಾರಿಗಳು, ಡೆತ್ನೋಟ್ನಲ್ಲಿ ಉಲ್ಲೇಖವಾಗಿದ್ದ ಹೆಸರಿನವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಅದರಂತೆ ಐವರು ಬೀದರಿನ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆದರೆ ವಿಚಾರಣೆ ಸಮಯದಲ್ಲಿ ಸಮಪರ್ಕ ಉತ್ತರ ನೀಡದ ಕಾರಣ ಇವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಡೆತ್ನೋಟ್ ಬರೆದಿಟ್ಟು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರ ಸಚಿನ್(26) ಡಿಸೆಂಬರ್ 26ರಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
15 ಲಕ್ಷ ರೂ.ಗಳಿಗೂ ಹೆಚ್ಚು ಹಣ ಪಡೆದು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಜೊತೆಗೆ 1 ಕೋಟಿ ರೂ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ವಿರುದ್ಧ ಡೆತ್ನೋಟ್ನಲ್ಲಿ ಗಂಭೀರ ಆರೋಪ ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ