ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಎರಡನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯಿಸುತ್ತಿದ್ದ ಮೊದಲ ಪತ್ನಿ ಶಮಾ ರಿಯಾಜ್ ಪಠಾಣ್ ಅವಳನ್ನು ಹತ್ಯೆ ಮಾಡಿದ್ದಾನೆ.
ಧಾರವಾಡ ಲಕ್ಷ್ಮಿ ಸಿಂಗ್ ಕೇರಿಯ ಹಾಲಿ ಇಂಚಲ ಗ್ರಾಮದ ಶಮಾ ರಿಯಾಜ ಪಠಾಣ (27) ಕೊಲೆಯಾದ ಮಹಿಳೆ. ಧಾರವಾಡ ಲಕ್ಷ್ಮಿ ಸಿಂಗಕೇರಿಯ ರಿಯಾಜ ಸಾಹೇಬಖಾನ ಶಮಾ ರಿಯಾಜ್ ಪರ್ಜಾನಾ ಪಠಾಣ (30), ಫರ್ಜಾನಾ ರಿಯಾಜ ಪಠಾಣ (28) ಆರೋಪಿಗಳು ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರೂ ಆರೋಪಿಗಳು ಪರಾರಿಯಾಗಿದ್ದು ಡಿವೈಎಸ್‌ಪಿ ಚಿದಂಬರ ಇವರ ಮಾರ್ಗದರ್ಶನದಲ್ಲಿ ಪಿಐ ವೀರೇಶ ಮಠಪತಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಧಾರವಾಡ ಮೂಲದ ಶಮಾ ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ಎಂಬಾತನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ. ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ಬಂದು ದಂಪತಿ ನೆಲೆಸಿದ್ದರು. ರಿಯಾಜ್ ರಸ್ತೆ ಬದಿ ವಾಚ್, ಕನ್ನಡಗಳನ್ನು ಮಾರುತ್ತ ಜೀವನ ಸಾಗಿಸುತ್ತಿದ್ದ. ಆದರೆ ಒಂದೂವರೆ ವರ್ಷದ ಹಿಂದೆ ಫರ್ಜಾನಾ ಎಂಬುವಳನ್ನು ರಿಯಾಜ್ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದ. ಈ ವಿಚಾರ ತಿಳಿದ ಶಮಾ ಆಕೆಯನ್ನು ಬಿಟ್ಟು ತನ್ನ ಜೊತೆ ಇರುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಎರಡನೇ ಪತ್ನಿ ಫರ್ಜಾನಾಗೆ ರಿಯಾಜ್ ಹೇಳಿದ್ದಾನೆ. ಇದನ್ನು ಕೇಳಿದ ನಂತರ ಶಮಾಳನ್ನು ಮುಗಿಸುವಂತೆ ಫರ್ಜಾನಾ ಹೇಳಿದ್ದಾಳೆ.
ಅದರಂತೆ ಬುಧವಾರ ರಾತ್ರಿ ಶಮಾಳ ಮನೆಗೆ ಬಂದ ರಿಯಾಜ್ ಆಕೆ ಮಲಗಿದ ಮೇಲೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ ಮಗನ್ನು ಕರೆದುಕೊಂಡು ಫರ್ಜಾನಾಳ ಮನೆಗೆ ಹೋಗಿ ಅಲ್ಲಿಂದ ದಂಪತಿ ಊರು ಬಿಟ್ಟು ಹೋಗಿದ್ದಾರೆ. ಇನ್ನು ಇಬ್ಬರು ಹೆಣ್ಣು ಮಕ್ಕಳು ಅಜ್ಜಿ ಮನೆಯಲ್ಲಿದ್ದು ತಾಯಿಯ ಸಾವು ಹಾಗೂ ತಂದೆ ಊರು ಬಿಟ್ಟು ಹೋಗಿದ್ದರಿಂದ ಅನಾಥವಾಗಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ