ಶಿರಸಿ : ನೂರಾರು ವರ್ಷಗಳಿಂದ ಜನರೇ ಬೆಳೆಸಿಕೊಂಡು ಬರುತ್ತಿರುವ ಕಲೆ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಯಕ್ಷಗಾನ ಕಲೆ ಎಂದು ಖ್ಯಾತ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನೆಮ್ಮದಿ ರಂಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೋಕ ಹಾಸ್ಯಗಾರ ಅವರು ಬರೆದ ಯಕ್ಷಗಾನ ಸಂಶೋಧನಾ ಗ್ರಂಥ ದಶರೂಪಕಗಳ ದಶಾವತಾರ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಯಕ್ಷಗಾನ ಕೇವಲ ಮನರಂಜನೆಗಾಗಿ ಮಾತ್ರ ಇರುವ ಕಲೆಯಲ್ಲ, ಇದು ನಮ್ಮ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಬೆಳೆಸುತ್ತಿರುವ ಕಲೆಯಾಗಿದೆ. ಇದು ಕನ್ನಡ ಹಾಗೂ ಕರ್ನಾಟಕದ ಅಸ್ಮಿತೆ ಎಂದರು.
ಹದಿನೈದು ಇಪ್ಪತ್ತು ವರ್ಷಗಳ ಮೊದಲೇ ಯಕ್ಷಗಾನ ಪ್ರದರ್ಶನಕ್ಕೆ ಮೇಳಕ್ಕೆ ದಿನವನ್ನು ನಿಗದಿ ಮಾಡಲಾಗುತ್ತದೆಯೆಂದರೆ ಅದರ ಪ್ರಭಾವ ಹಾಗೂ ಪ್ರಾಮುಖ್ಯತೆ ಕರಾವಳಿ ಭಾಗದಲ್ಲಿದೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಆದರೆ ಕನ್ನಡದ ಇಷ್ಟೊಂದು ಧೀಮಂತಕಲೆಯಾದ ಯಕ್ಷಗಾನ ಇನ್ನೂ ಬಯಲು ಸೀಮೆ ಪ್ರದೇಶಕ್ಕೆ ವಿಸ್ತರಿಸಿಲ್ಲ. ಇದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ. ಈ ಕೆಲಸ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಉತ್ತರ ಕನ್ನಡದಲ್ಲಿ ಅನೇಕ ಮನೆತನಗಳು ಯಕ್ಷಗಾನದ ಮನೆತನಗಳಾಗಿವೆ. ಅಂಥ ಯಕ್ಷಗಾನ ಮನೆತನದಿಂದ ಬಂದವರು ಸಂಶೋಧನಾ ಗ್ರಂಥದ ಕೃತಿಕಾರರಾದ ಅಶೋಕ ಹಾಸ್ಯಗಾರರು. ಅವರು ಸಾಕಷ್ಟು ಅಧ್ಯಯನಗಳನ್ನು ನಡೆಸಿ ಬಹಳ ಅಧ್ಯಯನಶೀಲ ಕೃತಿಯನ್ನು ರಚಿಸಿದ್ದಾರೆ. ಇದು ತನ್ಮಯಶೀಲ ಮನಸ್ಥಿತಿಯಿಂದ ಮಾತ್ರ ಸಾಧ್ಯವಾಗುವಂಥದ್ದು. ಈ ಪುಸ್ತಕದಲ್ಲಿ ಅವರು ಯಕ್ಷಗಾನದ ಹಿಂದಿರುವ ಸಿದ್ಧಾಂತ ಹಾಗೂ ಅದರಲ್ಲಿರುವ ನಾಟ್ಯಶಾಸ್ತ್ರದ ಹಿನ್ನೆಲೆಯನ್ನು ವಿವಿಧ ಹಂತಗಳಲ್ಲಿ ಗುರುತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಯಕ್ಷಗಾನವನ್ನು ಜಾನಪದ ಕಲೆ ಮಾತ್ರವಲ್ಲ ಇದೊಂದು ಶಾಸ್ತ್ರೀಯ ಕಲೆಯೂ ಹೌದು ಎಂಬುದನ್ನು ಅವರು ಕೃತಿಯಲ್ಲಿ ಪ್ರತಿಪಾದಿಸಿದ್ದಾರೆ. ಯಾವುದೇ ಕಲೆ ನೂರಾರು ವರ್ಷಗಳಿಂದ ಬೆಳೆದು ಬರಬೇಕಾದರೆ ಅದಕ್ಕೊಂದು ಶಾಸ್ತ್ರೀಯ ಚೌಕಟ್ಟು ಇರಬೇಕಾಗುತ್ತದೆ. ಹಂತಹ ಚೌಕಟ್ಟುಗಳು ಇರುವ ಕಾರಣದಿಂದಲೇ ಯಕ್ಷಗಾನ ಬೆಳೆದುಬರುತ್ತಿದೆ. ಹೀಗಾಗಿ ಶಾಸ್ತ್ರೀಯ ಕಲೆಯಾಗಿರುವ ಯಕ್ಷಗಾನವನ್ನೂ ಶಾಸ್ತ್ರೀಯ ಕಲೆ ಎಂದು ಪರಿಗಣಿಸುವಂತಾಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಯಕ್ಷಗಾನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಯಕ್ಷಗಾನದ ಪ್ರಸಂಗ ಕರ್ತೃಗಳನ್ನು ಅಷ್ಟೊಂದು ಗುರುತಿಸುವ ಕೆಲಸವಾಗಿಲ್ಲ. ಯಕ್ಷಗಾನದಲ್ಲಿ ವೇಷಧಾರಿಗೆ ಹಾಗೂ ಹಿಮ್ಮೇಳದವರಿಗೆ ಸಿಗುವಷ್ಟು ಮಾನ್ಯತೆ ಹಾಗೂ ಗುರುತಿಸುವಿಕೆ ಪ್ರಸಂಗ ಕರ್ತೃಗಳಿಗೆ ಇಲ್ಲ. ಇದು ಯಾಕೆಂದು ನನಗೆ ಅರ್ಥವಾಗದ ಸಂಗತಿ. ಹೀಗಾಗಿ ಅವರನ್ನೂ ಗುರುತಿಸುವ ಕೆಲಸವಾಗಬೇಕು ಎಂದು ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಸಾಹಿತ್ಯವನ್ನೂ ಚರ್ಚಿಸುವಂತಾಗಬೇಕು. ಕನ್ನಡ ಸಾಹಿತ್ಯದ ಯಾವುದೇ ಸಮ್ಮೇಳನಗಳಲ್ಲಿ ಅಥವಾ ಕನ್ನಡ ಸಾಹಿತ್ಯ ಕಮ್ಮಟಗಳಲ್ಲಿ ಯಕ್ಷಗಾನದ ಸಾಹಿತ್ಯದ ಬಗ್ಗೆ ಚರ್ಚೆ ನಡೆಯುವುದಿಲ್ಲ. ಇಷ್ಟೊಂದು ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಹಾಗೂ ಸಾಹಿತ್ಯವೂ ಪ್ರಧಾನವಾಗಿರುವ ಯಕ್ಷಗಾನದ ಸಾಹಿತ್ಯದ ಬಗ್ಗೆಯೂ ಚರ್ಚೆ ನಡೆಯಬೇಕು. ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಯಕ್ಷಗಾನವೂ ಅಧ್ಯಯನ ಆಗಬೇಕು ಎಂದರು.
ಕೃತಿಯ ಬಗ್ಗೆ ಮಾತನಾಡಿದ ವಿದ್ಯಾವಾಚಸ್ಪತಿ ವಿದ್ವಾನ್ ಉಮಾಕಾಂತ ಭಟ್ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಜಿ.ಎಲ್. ಹೆಗಡೆ ಅವರು, ದಶರುಪಕಗಳ ದಶಾವತಾರಗಳು ಕೃತಿಯು ಯಕ್ಷಗಾನದಲ್ಲಿ ಒಂದು ಸಂಶೋಧನಾ ಕೃತಿಯಾಗಿದೆ. ಇದು ಯಕ್ಷಗಾನ ಕಲೆಯ ಶಾಸ್ತ್ರೀಯತೆ ಬಗ್ಗೆ ಹತ್ತು ಹಲವು ಅಂಶಗಳನ್ನು ಉಲ್ಲೇಖಿಸಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃತಿಕಾರ ಅಶೋಕ ಹಾಸ್ಯಗಾರ ಅವರು, ಸುಮಾರು ಹತ್ತರಿಂದ ಹನ್ನೆರಡು ವರ್ಷಗಳ ಕಾಲ ಕೃತಿಯ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಈ ವೇಳೆ ಹಲವರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು. ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಿದ ನಂತರವೇ ಈ ಯಕ್ಷಗಾದ ಸಂಶೋಧನಾ ಗ್ರಂಥ ದಶರೂಪಕಗಳ ದಶಾವತಾರಗಳು ಪುಸ್ತಕ ರಚನೆ ಮಾಡಿದ್ದೇನೆ. ನನ್ನ ದೃಷ್ಟಿಯಲ್ಲಿ ಭರತನಾ ನಾಟ್ಯ ಶಾಸ್ತ್ರದಲ್ಲಿ ಹೇಳಿದ ಎಲ್ಲ ಅಂಶಗಳನ್ನೂ ಯಕ್ಷಗಾನದಲ್ಲಿ ಪ್ರಾದೇಶಿಕತೆಗೆ ಅನುಗುಣವಾಗಿ ಅಳವಡಿಸಲಾಗಿದೆ. ಭರತನ ನಾಟ್ಯ ಶಾಸ್ತ್ರದಲ್ಲಿ ಹೇಳಿದ ಸಂಗತಿಗಳನ್ನು ಯಕ್ಷಗಾನದಲ್ಲಿ ಇಲ್ಲಿನ ಅನುಕೂಲಕ್ಕೆ ತಕ್ಕಂತೆ ಅನ್ವಯಿಸಲಾಗಿದೆ. ಚೌಕಿಮನೆ, ತೆರೆ ಕುಣಿತ, ರಂಗಪೂಜೆ, ರಂಗಸ್ಥಳ ನಿರ್ಮಾಣದಿಂದ ಹಿಡಿದು ಯಕ್ಷಗಾನದ ಪ್ರತಿಯೊಂದು ಸಂಗತಿಗಳೂ ಭರತನ ನಾಟ್ಯಶಾಸ್ತ್ರದಲ್ಲಿ ಇರುವುದೇ ಆಗಿದೆ ಎಂದರು.
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ, ಯಾಜಿ ಪ್ರಕಾಶನದ ಮುಖ್ಯಸ್ಥೆ ಸವಿತಾ ಯಾಜಿ ಮಾತನಾಡಿದರು. ಈ ವೇಳೆ ಇಡಗುಂಜಿ ಯಕ್ಷಗಾನ ಮೇಳದ ಮುಖ್ಯಸ್ಥರಾದ ಶಿವಾನಂದ ಹೆಗಡೆ ಕೆರೆಮನೆ, ಕರ್ಕಿಹಾಸ್ಯಗಾರ ಮೇಳದ ಕಲಾವಿದರಾದ ಶ್ರೀಧರ ಹೆಗಡೆ, ಪುಸ್ತಕಕ್ಕೆ ಮುಖಪುಟ ಬಿಡಿಸಿದ ಕಲಾವಿದ ಸತೀಶ ಯಲ್ಲಾಪುರ, ಪುಸ್ತಕದ ಪುಟ ವಿನ್ಯಾಸಕಾರರಾದ ಜಿ.ಟಿ.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸುನಂದಾ ಹಾಸ್ಯಗಾರ ಮೊದಲಾದವರು ಇದ್ದರು. ಪ್ರೊ.ಕೆ.ಎನ್ ಹೊಸ್ಮನಿ ನಿರ್ವಹಿಸಿದರು. ಕಾರ್ಯಕ್ರಮವನ್ನು ಯಕ್ಷಗಾನದ ತೆರೆಕಣಿತದ ಮೂಲಕ ಆರಂಭಿಸಲಾಯಿತು. ಯಕ್ಷಗಾನ ಕಲಾವಿದರಾದ ನಿರ್ಮಲಾ ಗೋಳಿಕೊಪ್ಪ ಅವರ ಪುಟಾಣಿ ಶಿಷ್ಯರು ಯಕ್ಷಗಾನದ ತೆರೆಕಣಿತ ಪ್ರದರ್ಶಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ