ಹೈದರಾಬಾದ್: ಭೀಕರ ಘಟನೆಯೊಂದರಲ್ಲಿ ಮಾಜಿ ಸೈನಿಕನೊಬ್ಬ ತನ್ನ ಪತ್ನಿಯನ್ನು ಕೊಂದು ನಂತರ ಆಕೆಯ ದೇಹವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಘಟನೆ ವರದಿಯಾಗಿದೆ. ಹೈದರಾಬಾದಿನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ಬುಧವಾರ ಈ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವನಾದ ಗುರುಮೂರ್ತಿ (45) ಎಂಬಾತ ಕೆಲಕಾಲ ಸೇನೆಯಲ್ಲಿ ಕೆಲಸ ಮಾಡಿದ್ದಾನೆ. ಪ್ರಸ್ತುತ ಕಂಚನ್‌ಬಾಗ್‌ನಲ್ಲಿರುವ ಡಿಆರ್‌ಡಿಒದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ.
ಮೀರಪೇಟೆಯ ನ್ಯೂ ವೆಂಕಟೇಶ್ವರ ನಗರ ಕಾಲೋನಿಯಲ್ಲಿ ಪತ್ನಿ ವೆಂಕಟ ಮಾಧವಿ (35) ಹಾಗೂ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಲಭ್ಯ ಮಾಹಿತಿ ಪ್ರಕಾರ ಕಳೆದ ಹಲವು ದಿನಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಜನವರಿ 18 ರಂದು ಮಾಧವಿ ನಾಪತ್ತೆಯಾಗಿದ್ದು, ಮೂರ್ತಿ ಈ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಅವರು ಮೀರಪೇಟೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ದೂರು ದಾಖಲಿಸಲು ಮೂರ್ತಿ ಅವರೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾನೆ ಮತ್ತು ಆಕೆಯ ಶೋಧ ಕಾರ್ಯದಲ್ಲಿ ಪೊಲೀಸರಿಗೆ ಬೆಂಬಲವನ್ನೂ ನೀಡಿದ್ದಾನೆ.
ಕಳೆದ ಕೆಲವು ದಿನಗಳಿಂದ ದಂಪತಿ ಮಧ್ಯೆ ಜಗಳವಾಗುತ್ತಿತ್ತು ಎಂದು ಪೊಲೀಸರಿಗೆ ತನಿಖೆ ವೇಳೆ ಕಂಡುಬಂದಿದ್ದರಿಂದ ಅನುಮಾನದ ಮೇಲೆ ಪೊಲೀಸರು ಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆತ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೋಪದ ಭರದಲ್ಲಿ ಪತ್ನಿಯನ್ನು ಚಾಕುವಿನಿಂದ ಪತ್ನಿಯನ್ನು ಕೊಂದ ನಂತರ ಆಕೆಯನ್ನು ತುಂಡು ಮಾಡಿ ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿದ್ದೇನೆ ಎಂದು ಹೇಳಿದ್ದಾನೆ. ನಂತರ ತಾನು ಬೇಯಿಸಿದ ಭಾಗಗಳನ್ನು ಜಿಲ್ಲೆಲಗುಡಾದ ಕೆರೆಗೆ ಎಸೆದಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಕೆರೆಯಲ್ಲಿ ಇದನ್ನು ಹುಡುಕುತ್ತಿದ್ದಾರೆ.
ದಂಪತಿ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ದಿಕ್ಕುತಪ್ಪಿಸುವ ಯತ್ನದಲ್ಲಿ ತಾನೇ ಪತ್ನಿಯನ್ನು ಕೊಂದ ಬಳಿಕ ಪೊಲೀಸರಿಗೆ ದೂರು ನೀಡಿ ನಾಟಕ ಮಾಡಿದರೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ