ಉತ್ತರಾಖಂಡದ ರೂರ್ಕಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಕುನ್ವರ್ ಪ್ರಣವ ಸಿಂಗ್ ಚಾಂಪಿಯನ್ ಮತ್ತು ಪಕ್ಷೇತರ ಶಾಸಕ ಉಮೇಶಕುಮಾರ ನಡುವಿನ ವೈಷಮ್ಯ ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಪರಸ್ಪರರ ಕಚೇರಿಗೆ ಗುಂಡು ಹಾರಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವೀಡಿಯೋದಲ್ಲಿ ಚಾಂಪಿಯನ್ ತನ್ನ ಬೆಂಬಲಿಗರೊಂದಿಗೆ ಉಮೇಶಕುಮಾರ ಅವರ ಕಚೇರಿಯ ಮೇಲೆ ಹಲವಾರು ಗುಂಡುಗಳನ್ನು ಹಾರಿಸುವುದನ್ನು ತೋರಿಸುತ್ತದೆ. ಅವರು ಪಿಸ್ತೂಲುಗಳನ್ನು ಬೀಸುವುದು, ಕಲ್ಲುಗಳನ್ನು ಎಸೆಯುವುದು ಮತ್ತು ನಿಂದನೆಗಳನ್ನು ಮಾಡುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ, ಮುಯ್ಯಿಗೆ ಮುಯ್ಯಿ ಎಂಬಂತೆ ಪಕ್ಷೇತರ ಶಾಸಕ ಉಮೇಶಕುಮಾರ ಸಹ ತನ್ನ ಬೆಂಬಲಿಗರೊಂದಿಗೆ ಚಾಂಪಿಯನ್ ಕಚೇರಿಯ ಮೇಲೆ ಗುಂಡು ಹಾರಿಸಿದ್ದಾರೆ.
ಈಗ ಇವರಿಬ್ಬರ ಪರವಾನಿಗೆ ಪಡೆದ ಪಿಸ್ತೂಲ್‌ಗಳನ್ನು ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಪೊಲೀಸರು ಶಿಫಾರಸು ಮಾಡಿದ್ದಾರೆ ಮತ್ತು ಅವರಿಗೆ ಒದಗಿಸಲಾದ ಭದ್ರತೆಯನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ ಎಂದು ಹರಿದ್ವಾರದ ಎಸ್‌ಎಸ್‌ಪಿ ಪ್ರಮೇಂದ್ರ ಸಿಂಗ್ ದೋವಲ್ ತಿಳಿಸಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.
ಶನಿವಾರ ಸಂಜೆ ಶಾಸಕ ಉಮೇಶಕುಮಾರ ಅವರು ಮಾಜಿ ಶಾಸಕ ಪ್ರಣವ ಚಾಂಪಿಯನ್ ಮನೆಗೆ ಆಗಮಿಸಿ ಹೊರಗೆ ಬರುವಂತೆ ಸವಾಲು ಹಾಕಿದ್ದರು. ಮರುದಿನ, ಪ್ರಣವ್ ಸಿಂಗ್ ತನ್ನ ಹತ್ತಾರು ಬೆಂಬಲಿಗರೊಂದಿಗೆ ಉಮೇಶಕುಮಾರ ಅವರ ರೂರ್ಕಿ ಕಚೇರಿಯ ಮುಂದೆ ಗದ್ದಲ ಸೃಷ್ಟಿಸಿದರು ಮತ್ತು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದರು. ಚಾಂಪಿಯನ್‌ನ ಗಲಾಟೆ ಮತ್ತು ಅವರ ಕಚೇರಿಗೆ ಗುಂಡು ಹಾರಿಸಿದ ಬಗ್ಗೆ ಶಾಸಕ ಕುಮಾರ ಅವರಿಗೆ ತಿಳಿದ ತಕ್ಷಣ, ಅವರು ತಮ್ಮ ಹತ್ತಾರು ಬೆಂಬಲಿಗರೊಂದಿಗೆ ಚಾಂಪಿಯನ್ ಕಚೇರಿಗೆ ತಲುಪಿ ಅದೇ ರೀತಿಯಲ್ಲಿ ಗಲಾಟೆ ಮಾಡಿದರು ಎಂದು ಹೇಳಲಾಗಿದೆ.
ಇಬ್ಬರೂ ಪರಸ್ಪರರ ವಿರುದ್ಧ ದೂರು ದಾಖಲಿಸಿದ ನಂತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಚಾಂಪಿಯನ್ ಅವರನ್ನು ರಾಣಿಪುರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಶಾಸಕ ಉಮೇಶಕುಮಾರ ರೂರ್ಕಿ ಪೊಲೀಸ್ ಠಾಣೆಯಲ್ಲಿದ್ದಾರೆ.
ಚಾಂಪಿಯನ್ ಪ್ರಕಾರ, ಖಾನ್ಪುರ ಶಾಸಕ ಶನಿವಾರ ರಾತ್ರಿ ಲಾಂಧೌರಾದಲ್ಲಿರುವ ಅವರ ಮಹಲಿನ ಮೇಲೆ ದಾಳಿ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಶಾಸಕ ಉಮೇಶಕುಮಾರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ಚಾಂಪಿಯನ್ ಅವರ ಪತ್ನಿ ಕೂಡ ಹೇಳಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಅವರು “ನಮ್ಮ ಗೌರವದ ರಕ್ಷಣೆ” ಎಂದು ಪ್ರತಿಕ್ರಿಯಿಸುವ ರೀತಿಯಲ್ಲಿ ಅವರ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಎರಡು ದಿನಗಳ ಹಿಂದೆ ಚಾಂಪಿಯನ್ ತನ್ನನ್ನು ಮತ್ತು ತನ್ನ ಪೋಷಕರನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಂದಿಸಿದ್ದಾರೆ ಎಂದು ಉಮೇಶಕುಮಾರ ಆರೋಪಿಸಿದ್ದಾರೆ. ಇದು ತಾನು ಲಕ್ಕಸರ ಮಾಜಿ ಶಾಸಕ ಚಾಂಪಿಯನ್ ಮನೆಗೆ ತೆರಳಿ ನಿಂದಿಸಲು ಕಾರಣವಾಯಿತು ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ