ಹುಬ್ಬಳ್ಳಿ : 40 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಕಿರುಕುಳದಿಂದ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪೀಟರ್ ಗೊಲ್ಲಪಲ್ಲಿ ಎಂಬವರು ಪತ್ನಿ ಕಿರುಕುಳದಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೀಟರ್ ಸಾಯುವ ಮುನ್ನ ಡೆಟ್ ನೋಟ್ ಬರೆದಿಟ್ಟಿದ್ದು ಡ್ಯಾಡಿ ಆಯಮ್ ಸಾರಿ, ಪಿಂಕಿ(ಹೆಂಡತಿ) ಇಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆಥ್ (ಅಪ್ಪಾ, ನನ್ನನ್ನು ಕ್ಷಮಿಸಿ, ನನ್ನ ಹೆಂಡತಿ ನನ್ನನ್ನು ಕೊಲ್ಲುತ್ತಿದ್ದಾಳೆ, ಅವಳು ನನ್ನ ಸಾವನ್ನು ಬಯಸುತ್ತಾಳೆ) ಎಂದು ಡೆತ್ ನೋಟಲ್ಲಿ ಉಲ್ಲೇಖಿಸಿದ್ದಾರೆ.
ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮನವಿ ಮಾಡಿ, ಅಣ್ಣಾ ಪೋಷಕರನ್ನು ಚೆನ್ನಾಗಿ ನೋಡಿಕೋ‘ ಎಂದು ಡೆತ್ ನೋಟ್‌ನಲ್ಲಿ ಪೀಟರ್ ಉಲ್ಲೇಖಿಸಿದ್ದಾರೆ. ಹೀಗಾಗಿ ಪೀಟರ್ ಸಂಬಂಧಿಕರು, ಶವ ಸಂಸ್ಕಾರ ಪೆಟ್ಟಿಗೆ ಮೇಲೆ ಹೆಂಡತಿ ಕಾಟ ತಾಳಲಾರದೆ ಸತ್ತನು ಎಂದು ಬರೆದಿದ್ದಾರೆ.
ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಮೂರು ತಿಂಗಳ ನಂತರ ಪದೇ ಪದೇ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಅವರ ಪತ್ನಿ ಕೂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಜೀವನಾಂಶವಾಗಿ 20 ಲಕ್ಷ ರೂ.ಕೇಳಿದ್ದರು ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ಸಹೋದರ , ಭಾನುವಾರವಾದ್ದರಿಂದ ಎಲ್ಲರೂ ಚರ್ಚ್‌ಗೆ ಹೋಗಿದ್ದರು. ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಪೀಟರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಹೆಂಡತಿಯೇ ಕಾರಣ ಎಂದು ಬರೆದಿದ್ದಾರೆ. ನಮಗೆ ಹಾಗೂ ನನ್ನ ಸಹೋದರನಿಗೆ ನ್ಯಾಯ ಬೇಕು. ಆ ಮಹಿಳೆಯನ್ನು ಬಂಧಿಸಬೇಕು. ನನ್ನ ಸಹೋದರ ಅನುಭವಿಸಿದ್ದನ್ನು ಯಾರೂ ಅನುಭವಿಸಬಾರದು. ಆಕೆಯ ಅಣ್ಣ ಕೂಡ ಆತನನ್ನು ಥಳಿಸಿದ್ದಾನೆ ಮತ್ತು ಅದರ ಬಗ್ಗೆ ಪೊಲೀಸ್ ವರದಿ ಕೂಡ ಇದೆ” ಎಂದು ಅವರು ಹೇಳಿದರು.
ಮೃತ ಪೀಟರ್ ಸಹೋದರನ ದೂರಿನ ಆಧಾರದ ಮೇಲೆ ಅವರ ಪತ್ನಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ