ಪ್ರಯಾಗರಾಜ್ : ಮೌನಿ ಅಮಾವಾಸ್ಯೆಯ ಬೆಳಿಗ್ಗೆ ಮಹಾಕುಂಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿ ಸುಮಾರು 30 ಮಹಿಳೆಯರು ಗಾಯಗೊಂಡಿದ್ದಾರೆ.
‘ಅಮೃತ ಸ್ನಾನ’ಕ್ಕೆ ಮುನ್ನ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಟೆಂಟ್ ಸಿಟಿಗೆ ಕೋಟಿಗಟ್ಟಲೆ ಭಕ್ತರು ಹರಿದು ಬಂದರಂತೆ. ‘ಸಂಗಮ’ದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಜನಸಂದಣಿಯ ಮಧ್ಯೆ, ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದರು. ಈ ವೇಳೆ ಜನದಟ್ಟೆಣೆಯಿಂದಾಗಿ ಉಸಿರಾಟದ ಸಮಸ್ಯೆ ಎದುರಿಸಿದ ಕೆಲವು ಮಹಿಳೆಯರು ಮೂರ್ಛೆ ಹೋದರು. ಪ್ರಜ್ಞಾಹೀನರಾಗಿ ಮಹಿಳೆಯರು ಬೀಳುತ್ತಿದ್ದಂತೆ, ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಅವರನ್ನು ಮಹಾಕುಂಭ ಮೇಳದ ಮೈದಾನದೊಳಗಿನ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲದೆ, ಕೆಲವು ಗಂಭೀರವಾಗಿ ಗಾಯಗೊಂಡ ಮಹಿಳೆಯರನ್ನು ಬೈಲಿ ಆಸ್ಪತ್ರೆ ಮತ್ತು ಸ್ವರೂಪ್ ರಾಣಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.
ಅಖಿಲ ಭಾರತೀಯ ಅಖಾರ ಪರಿಷತ್ ಅಧ್ಯಕ್ಷ ಮಹಂತ ರವೀಂದ್ರ ಪುರಿ ಮಾತನಾಡಿ, ಸನ್ಯಾಸಿಗಳು ಮೌನಿ ಅಮವಾಸ್ಯೆಯ ಅಮೃತ ಸ್ನಾನವನ್ನು ರದ್ದುಗೊಳಿಸಿದ್ದಾರೆ. “ಬೆಳಿಗ್ಗೆ ಏನಾಯಿತು ಎಂದು ನೀವು ನೋಡಿದ್ದೀರಿ, ಅದಕ್ಕಾಗಿಯೇ ನಾವು ನಿರ್ಧರಿಸಿದ್ದೇವೆ … ಈ ಘಟನೆಯ ಬಗ್ಗೆ ನಮಗೆ ತಿಳಿಸುವ ವೇಳೆ ನಮ್ಮ ಎಲ್ಲಾ ಸಂತರು ಮತ್ತು ದಾರ್ಶನಿಕರು ‘ಸ್ನಾನ’ಕ್ಕೆ ಸಿದ್ಧರಾಗಿದ್ದರು. ಅದು ತಿಳಿದಿ ನಂತರ ಮೌನಿ ಅಮಾವಾಸ್ಯೆ’ಯಂದು ನಮ್ಮ ‘ಸ್ನಾನ’ವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಮಹಂತ ರವೀಂದ್ರ ಪುರಿ ತಿಳಿಸಿದರು.
ಅಖಾರ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮತ್ತು ಜುನಾ ಅಖಾರ ಪೋಷಕ ಮಹಾಂತ ಹರಿ ಗಿರಿ ಅವರು ಭಕ್ತರು ಎಲ್ಲಿದ್ದಾರೋ ಅಲ್ಲಿಯೇ ಗಂಗಾ ನದಿಯಲ್ಲಿ ಸ್ನಾನ ಮಾಡಿ ಮನೆಗೆ ತೆರಳುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಮಾತನಾಡಿದ್ದು, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮೇಳದ ಮೈದಾನದೊಳಗೆ ಇತರ ಸ್ಥಳಗಳಲ್ಲಿ ಇದೇ ರೀತಿಯ ಪರಿಸ್ಥಿತಿಗಳು ಉಂಟಾಗುವುದನ್ನು ತಪ್ಪಿಸಲು ಅಧಿಕಾರಿಗಳು ಪಾಂಟೂನ್ ಸೇತುವೆಗಳನ್ನು ಬಂದ್ ಮಾಡಿದರು.
ಎರಡನೇ ಅಮೃತ್ ಸ್ನಾನಕ್ಕಿಂತ ಒಂದು ದಿನ ಮುಂಚಿತವಾಗಿ, ಸುಮಾರು ಐದು ಕೋಟಿ ಜನರು ಈಗಾಗಲೇ ಪ್ರಯಾಗರಾಜ್ ತಲುಪಿದ್ದಾರೆ, ಆದರೆ ಜನಸಮೂಹವು ಅಮೃತ್ ಸ್ನಾನದ ದಿನ 10 ಕೋಟಿಗೆ ಏರಬಹುದು ಎಂದು ನಿರೀಕ್ಷಿಸಲಾಗಿದೆ. ಅಧಿಕಾರಿಗಳು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ, AI-ಚಾಲಿತ ಕಣ್ಗಾವಲು, ಡ್ರೋನ್ ಮೇಲ್ವಿಚಾರಣೆ ಮತ್ತು ಹೆಚ್ಚಿದ ಪೊಲೀಸ್ ನಿಯೋಜನೆಯೊಂದಿಗೆ ಬೃಹತ್ ಜನಸಂದಣಿಯನ್ನು ನಿರ್ವಹಿಸುತ್ತಿದ್ದಾರೆ. ಮಹಾಕುಂಭ ಮೇಳದ ಪ್ರದೇಶವನ್ನು ಮುಂದಿನ ಕೆಲವು ದಿನಗಳವರೆಗೆ ವಾಹನ ರಹಿತ ವಲಯವೆಂದು ಈಗಾಗಲೇ ಘೋಷಿಸಲಾಗಿದ್ದು, ಪ್ರಯಾಗರಾಜ್ ಆಡಳಿತವು ಸ್ಥಳೀಯ ನಿವಾಸಿಗಳಿಗೆ ನಾಲ್ಕು ಚಕ್ರದ ವಾಹನಗಳನ್ನು ಬಳಸಬೇಡಿ ಎಂದು ಸೂಚಿಸಿದೆ. ಮತ್ತು ಹಿರಿಯ ನಾಗರಿಕರನ್ನು ಸಂಗಮಕ್ಕೆ ಕೊಂಡೊಯ್ಯುವ ವೇಳೆ ಮಾತ್ರ ದ್ವಿಚಕ್ರ ವಾಹನಗಳನ್ನು ಬಳಸಲು ಮನವಿ ಮಾಡಿದೆ.
ಮಹಾಕುಂಭ ಮೇಳಕ್ಕೆ ಹೋಗುವವರಿಗಾಗಿ ರೈಲ್ವೆ ಇಲಾಖೆಯು 190 ವಿಶೇಷ ರೈಲುಗಳು ಸೇರಿದಂತೆ 360 ರೈಲುಗಳನ್ನು ಓಡಿಸುತ್ತಿದೆ, “ಉತ್ತರ ರೈಲ್ವೆ, ಈಶಾನ್ಯ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೇ ಎಂಬ ಮೂರು ವಲಯಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ” ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಸತೀಶಕುಮಾರ ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರವು ಮಹಾ ಕುಂಭ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರನ್ನು ನಿಯೋಜಿಸಿದೆ, ಜೊತೆಗೆ ಮಹಾಕುಂಭ ಮೇಳದ ಪ್ರದೇಶದ ಪ್ರತಿಯೊಂದು ವಲಯದಲ್ಲಿ ಸಣ್ಣ ಮತ್ತು ದೊಡ್ಡ ಶಸ್ತ್ರಚಿಕಿತ್ಸೆಗಳಿಗೆ ನಿಬಂಧನೆಗಳನ್ನು ಹೊಂದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಹೆಚ್ಚುವರಿಯಾಗಿ, ಯಾವುದೇ ತುರ್ತು ಸಂದರ್ಭಗಳನ್ನು ನಿಭಾಯಿಸಲು 300 ತಜ್ಞ ವೈದ್ಯರನ್ನು ಮಹಾಕುಂಭ ನಗರದಲ್ಲಿರುವ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾ ಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಈ ವರ್ಷ, ಪ್ರತಿ 144 ವರ್ಷಗಳಿಗೊಮ್ಮೆ ಸಂಭವಿಸುವ ‘ತ್ರಿವೇಣಿ ಯೋಗ’ ಎಂದು ಕರೆಯಲ್ಪಡುವ ಅಪರೂಪದ ಆಕಾಶ ಜೋಡಣೆಯಿಂದಾಗಿ ಈ ಸಂದರ್ಭವು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.
ಕುಂಭಮೇಳದ ಸಂಪ್ರದಾಯದಂತೆ, ‘ಸನ್ಯಾಸಿ, ಬೈರಾಗಿ ಮತ್ತು ಉದಾಸೀನ್’ ಎಂಬ ಮೂರು ಪಂಗಡಗಳಿಗೆ ಸೇರಿದ ಅಖಾರಗಳು ಸಂಗಮ ಘಾಟಿಗೆ ಭವ್ಯ ಹಾಗೂ ವಿಸ್ಮಯಕಾರಿ ಮೆರವಣಿಗೆಯ ನಂತರ ಅನುಕ್ರಮದಲ್ಲಿ ಪವಿತ್ರ ಸ್ನಾನವನ್ನು ಮಾಡುತ್ತಾರೆ.
ಬೂದಿ ಬಳಿದುಕೊಂಡ ನಾಗಗಳು ಸೇರಿದಂತೆ ದಾರ್ಶನಿಕರು ಮತ್ತು ಸಂತರು ನಂತರ ಮೌನಿ ಅಮವಾಸ್ಯೆಯಂತಹ ವಿಶೇಷ ಸ್ನಾನದ ದಿನಾಂಕಗಳಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಮುಳುಗೇಳುತ್ತಾರೆ. ಮೌನಿ ಅಮಾವಾಸ್ಯೆಯನ್ನು ಎಲ್ಲಾ ವಿಶೇಷ ಸ್ನಾನದ ದಿನಾಂಕಗಳಲ್ಲಿ ಅತ್ಯಂತ ಮಂಗಳಕರ ದಿನಾಂಕವೆಂದು ಪರಿಗಣಿಸಲಾಗುತ್ತದೆ ಮತ್ತು ಈ ದಿನ ಪವಿತ್ರ ನದಿಗಳ ನೀರು ‘ಅಮೃತ’ ಆಗಿ ಬದಲಾಗುತ್ತದೆ ಎಂದು ನಂಬಲಾಗಿದೆ. ಭಕ್ತಾದಿಗಳ ಮೇಲೆ ಹೆಲಿಕಾಪ್ಟರ್ ಬಳಸಿ 25 ಕ್ವಿಂಟಾಲ್ ಗುಲಾಬಿ ದಳಗಳನ್ನು ಸುರಿಯಲು ಸರ್ಕಾರ ಯೋಜಿಸಿದೆ.
ಮಹಾ ಕುಂಭ 2025 ಈಗಾಗಲೇ ಕಳೆದ 17 ದಿನಗಳಲ್ಲಿ 15 ಕೋಟಿ ಯಾತ್ರಾರ್ಥಿಗಳ ಪವಿತ್ರ ಸ್ನಾನಕ್ಕೆ ಸಾಕ್ಷಿಯಾಗಿದೆ. ಮಂಗಳವಾರವೊಂದರಲ್ಲೇ 4.80 ಕೋಟಿ ಭಕ್ತಾದಿಗಳು ಸಂಗಮದಲ್ಲಿ ಮುಳುಗಿ ಎದ್ದಿದ್ದಾರೆ. ಮಕರ ಸಂಕ್ರಾಂತಿಯಂದು (3.5 ಕೋಟಿ) ಅಮೃತ ಸ್ನಾನ ಮಾಡಿದ್ದರು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಮಹಾಕುಂಭವು ಜನವರಿ 13 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರವರೆಗೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ