ಪ್ರಯಾಗರಾಜ್: ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಕ್ತರಿಗೆ ಭಂಡಾರ (ಸಮುದಾಯ ಹಬ್ಬ)ದಲ್ಲಿ ನೀಡಲಾಗುವ ಆಹಾರಕ್ಕೆ ಬೂದಿ ಬೆರೆಸಿದ ವೀಡಿಯೊ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರನ್ನು ಗುರುವಾರ ಅಮಾನತು ಮಾಡಲಾಗಿದೆ.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸೊರನ್‌ನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬ್ರಿಜೇಶಕುಮಾರ ತಿವಾರಿ ಎಂಬವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿಪಿ (ಗಂಗಾ ನಗರ) ಕುಲದೀಪ ಸಿಂಗ್ ಗುಣಾವತ್ ತಿಳಿಸಿದ್ದಾರೆ.
ವೀಡಿಯೊ ದೃಶ್ಯಗಳಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಒಲೆಯ ಮೇಲೆ ತಯಾರಿಸುವ ಆಹಾರಕ್ಕೆ ಬೂದಿಯನ್ನು ಹಾಕುತ್ತಿರುವುದು ಕಂಡುಬಂದಿದೆ. ಬಳಕೆದಾರರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಡಿಸಿಪಿ ಗಂಗಾ ನಗರ ಅವರ ಎಕ್ಸ್ ಅಕೌಂಟ್ ಅನ್ನು ಟ್ಯಾಗ್ ಮಾಡಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಈ “ನಾಚಿಕೆಗೇಡಿನ ಕೃತ್ಯ”ಕ್ಕಾಗಿ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಸಿಪಿ ಗಂಗಾನಗರದ ಅಧಿಕೃತ ಖಾತೆ ಉತ್ತರಿಸಿ, “ವಿಷಯವನ್ನು ಗಮನದಲ್ಲಿಟ್ಟುಕೊಂಡು, ಪೊಲೀಸ್ ಉಪ ಆಯುಕ್ತರು (ಗಂಗಾ ನಗರ) ಎಸಿಪಿ ಸೊರಾನ್ ಅವರ ವರದಿಯ ಆಧಾರದ ಮೇಲೆ ಸೊರನ್ ಎಸ್‌ಎಚ್‌ಒ ಅವರನ್ನು ಅಮಾನತುಗೊಳಿಸಿದ್ದಾರೆ. ಇಲಾಖಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಈ ವೀಡಿಯೊವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರು ಇದನ್ನು ಗಮನಿಸುವಂತೆ ಒತ್ತಾಯಿಸಿದ್ದಾರೆ. “ಮಹಾಕುಂಭದಲ್ಲಿ ಸಿಕ್ಕಿಬಿದ್ದವರಿಗೆ ಅನ್ನ-ನೀರು ಒದಗಿಸುವ ವ್ಯವಸ್ಥೆ ಮಾಡುತ್ತಿರುವವರ ಉತ್ತಮ ಪ್ರಯತ್ನಗಳು ರಾಜಕೀಯ ವೈಷಮ್ಯದಿಂದ ನನೆಗುದಿಗೆ ಬೀಳುತ್ತಿರುವುದು ದುರದೃಷ್ಟಕರ. ಸಾರ್ವಜನಿಕರು ಗಮನಿಸಬೇಕು! ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ ಯಾದವ್ ಹೇಳಿದ್ದಾರೆ.
ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಬರುತ್ತಿರುವ ಲಕ್ಷಾಂತರ ಯಾತ್ರಿಕರಿಗೆ ಉಚಿತ ಅಥವಾ ಕೈಗೆಟುಕುವ ದರದಲ್ಲಿ ಊಟವನ್ನು ನೀಡಲು ಹಲವಾರು ವ್ಯಕ್ತಿಗಳು, ಗುಂಪುಗಳು ಮತ್ತು ಸಂಸ್ಥೆಗಳು ಸಮುದಾಯ ಅಡುಗೆಮನೆಗಳನ್ನು ಸ್ಥಾಪಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ