ಕೋಲ್ಕತಾ: ಆಘಾತಕಾರಿ ವಿದ್ಯಮಾನದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ, ಹೀಗಾಗಿ ನಿನ್ನ ಕಿಡ್ನಿ ಮಾರಾಟ ಮಾಡು ಎಂದು ಒತ್ತಾಯಿಸುತ್ತಿದ್ದ ಪಶ್ಚಿಮ ಬಂಗಾಳದ ಮಹಿಳೆಯೊಬ್ಬಳು ತನ್ನ ಪತಿಗೆ ಮೂತ್ರಪಿಂಡವನ್ನು ಮಾರಾಟ ಮಾಡುವಂತೆ ಒತ್ತಾಯಿಸಿ, ಮಾರಾಟ ಮಾಡಿದ ನಂತರ ಹಣ ತೆಗೆದುಕೊಂಡು ತನ್ನ ಫೇಸ್‌ಬುಕ್‌ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿರುವುದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 10 ಲಕ್ಷ ರೂ.ಗಳಿಗೆ ಕಿಡ್ನಿ ಮಾರಿದ ಪತಿ ಈಗ ತನ್ನ ಪತ್ನಿಯ ಕುಕೃತ್ಯದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮೂಲಗಳ ಪ್ರಕಾರ ಸಂತ್ರಸ್ತ ಪತಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಇದ್ದಾಳೆ. ಮಗಳ ವಿದ್ಯಾಭ್ಯಾಸದ ವಿಚಾರ ಮುಂದಿಟ್ಟುಕೊಂಡು ಪತಿಗೆ ನಿರಂತರ ಒತ್ತಾಯ ಮಾಡುತ್ತಿದ್ದ ಮಹಿಳೆ, ನಿನ್ನ ಆದಾಯ ಸಾಲುತ್ತಿಲ್ಲ. ಮಗಳ ವಿದ್ಯಾಭ್ಯಾಸಕ್ಕೆ ಮತ್ತಷ್ಟು ಹಣ ಬೇಕು ಎಂದು ಒತ್ತಡ ಹೇರುತ್ತಿದ್ದಳು. ಕಿಡ್ನಿ ಮಾರಿದರೆ ಹಣ ಬರುತ್ತದೆ ಎಂಬ ಮಾಹಿತಿ ತಿಳಿದಿ ನಂತರ ತನ್ನ ಗಂಡನಿಗೆ ಕಿಡ್ನಿ ಮಾರಾಟ ಮಾಡಿ ಹಣ ತರುವಂತೆ ಪೀಡಿಸುತ್ತಿದ್ದಳು.
ಇವಳ ಕಾಟ ತಾಳಲಾರದೆ ಮತ್ತು ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಗಂಡ ಕಿಡ್ನಿ ಮಾರಲು ಒಪ್ಪಿಕೊಂಡಿದ್ದ. ಬಳಿಕ ಒಂದು ತಿಂಗಳ ನಂತರ, ಒಂದು ಮೂತ್ರಪಿಂಡವನ್ನು 10 ಲಕ್ಷ ರೂ. ಗೆ ಮಾರಾಟ ಮಾಡಲಾಗಿತ್ತು. ಅದರಂತೆ ಈತನಿಗೆ 10 ಲಕ್ಷ ರೂ ಹಣ ಕೂಡ ಸಂದಾಯವಾಗಿತ್ತು. ಈ ನಿರ್ಧಾರದ ಹಿಂದೆ ತನ್ನ ಹೆಂಡತಿಯ ಗುಪ್ತ ಉದ್ದೇಶಗಳಿವೆ ಎಂಬುದು ಆತನಿಗೆ ಗೊತ್ತಾಗಲಿಲ್ಲ.
ಆದರೆ ಹಣ ಕೈ ಸೇರುತ್ತಿದ್ದಂತೆಯೇ ಹೊಸ ನಾಟಕ ಶುರು ಮಾಡಿದ್ದ ಹೆಂಡತಿ ಈ ಹಣವನ್ನು ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ಗಂಡನಿಂದ ಹಣ ತೆಗೆದುಕೊಂಡಿದ್ದಳು. ಬಳಿಕ ನಡು ರಾತ್ರಿ ಹಣದೊಂದಿಗೆ ಮನೆಬಿಟ್ಟು ತನ್ನ ಫೇಸ್ ಬುಕ್ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆಂಡತಿ ಬ್ಯಾರಕ್‌ಪುರದ ಸುಭಾಷ ಕಾಲೋನಿಯಲ್ಲಿ ವಾಸಿಸುವ ರವಿ ದಾಸ್ ಎಂಬಾತನೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯ ಬೆಳೆಸಿಕೊಂಡಿದ್ದಳು. ಈ ಮಹಿಳೆ ರವಿ ದಾಸ್ ಜೊತೆ ಬ್ಯಾರಕ್‌ಪುರದಲ್ಲಿ ಸಹಬಾಳ್ವೆ ನಡೆಸಲು ಆರಂಭಿಸಿದ್ದನ್ನು ತಿಳಿದ ಕುಟುಂಬ ಶುಕ್ರವಾರ ಇವರು ವಾಸಿಸುತ್ತಿದ್ದ ನಿವಾಸಕ್ಕೆ 10 ವರ್ಷದ ಮಗಳನ್ನು ಕರೆದುಕೊಂಡು ಬಂದಿತ್ತು.
ಆದರೆ, ರವಿ ಮತ್ತು ಮಹಿಳೆ ಬಾಗಿಲು ತೆರೆಯಲು ನಿರಾಕರಿಸಿದರು. ಸ್ವಲ್ಪ ಸಮಯದ ನಂತರ ಬಾಗಿಲು ತೆರೆದು “ನೀವು ಮಾಡಬೇಕಾದುದನ್ನು ಮಾಡಿ. ನಾನು ವಿಚ್ಛೇದನ ಪತ್ರವನ್ನು ಕಳುಹಿಸುತ್ತೇನೆ ಎಂದು ಹೆಂಡತಿ ಹೇಳಿದ್ದಾಳೆ. ಮಾವ, ಅತ್ತೆ, ಪತಿ, ಮಕ್ಕಳು ಎಷ್ಟು ಬೇಡಿಕೊಂಡರೂ ಹೆಂಡತಿ ಹೊರಗೆ ಕಾಲಿಡಲಿಲ್ಲ. ಅಲ್ಲದೆ, ಗಂಡನಿಗೆ ಬೆದರಿಕೆ ಹಾಕಿ ಥಳಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಗಂಡ ಈಗ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ