ಶಿರಸಿ: ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮಗೆ ಹಾಗೂ ನಿಮ್ಮ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಸುಳ್ಳು ಹೇಳುವುದನ್ನು, ಸುಳ್ಳು ಭರವಸೆಗಳನ್ನು ನೀಡುವುದನ್ನು ಬಿಟ್ಟು ಶಿರಸಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು (super-speciality hospital) ಮೊದಲು ನಿರ್ಮಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹೆಗಡೆ ಸವಾಲು ಹಾಕಿದ್ದಾರೆ.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 224 ಶಾಸಕರಲ್ಲಿ ʼಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿʼ ಎಂಬುದು ಇದ್ದರೆ ಅದನ್ನು ಶಾಸಕ ಭೀಮಣ್ಣ ನಾಯ್ಕ ಅವರಿಗೆ ಕೊಡಬೇಕು ಎಂಬಂತೆ ಬಾಸವಾಗುತ್ತಿದೆ. ಇದನ್ನ ನಾನು ಹೇಳುತ್ತಿಲ್ಲ ಶಿರಸಿ ಆಸ್ಪತ್ರೆಗೆ ಸಂಬಂಧಿಸಿದ ದಾಖಲೆಗಳೇ ಹೇಳುತ್ತಿವೆ ಎಂದು ಟೀಕಿಸಿದರು.
ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆ ವಿಷಯಕ್ಕೆ ಸಂಬಂಧಿಸಿ ಎಲ್ಲ ದಾಖಲಾತಿಗಳನ್ನು ಮಾಹಿತಿ ಹಕ್ಕು ಕಾಯ್ದೆ (RTI) ಅಡಿ ತೆಗೆದುಕೊಳ್ಳಲಾಗಿದೆ. ಎಂಆರ್‌ಐ (MRI) ಮತ್ತು ಸಿಟಿ (CT) ಸ್ಕ್ಯಾನ್ ಯಂತ್ರ, ಟ್ರಾಮಾ ಸೆಂಟರ್, ಹಾರ್ಟ್ ಅಪರೇಷನ್ ಮಾಡುವ ಸಾಮಗ್ರಿಗಳನ್ನು ಒಳಗೊಂಡು, ವೈದ್ಯಕೀಯ ಉಪಕರಣಗಳ ವಿಷಯವನ್ನೇ ಪ್ರಸ್ತಾವನೆಯಲ್ಲಿ ಮಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಪಂಡಿತ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆ ಎಂದು ತೀರ್ಮಾನ ಮಾಡಿ 6 ಕೋಟಿ ರೂ.ಗಳಿಗಿಂತ ಜಾಸ್ತಿ ಅನುದಾನ ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದ್ದು, ಆಸ್ಪತ್ರೆಯ ಉದ್ದೇಶಿತ ಸ್ವರೂಪವನ್ನೇ ಕೆಡಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಸಾಮಗ್ರಿಗಳು ಹಾಗೂ ಯಂತ್ರೋಪಕರಣಗಳನ್ನು ಪ್ರಸ್ತಾವನೆಯಿಂದ ತೆಗೆದುಹಾಕಿ, ಕೇವಲ 6 ಕೋಟಿ ರೂ.ಗಳ ಒಳಗಡೆ ಪ್ರಸ್ತಾವನೆ ಕೊಡಿ ಎಂದು ಹಿಂದಿನ ವೈದ್ಯಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದ ಕಾರಣ ಅವರನ್ನು ವರ್ಗಾವಣೆ ಮಾಡಲು ಒತ್ತಡ ಹಾಕಲು ಶಾಸಕರ ಸೂಚನೆ ಮೇರೆಗೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮನವಿ ಕೊಡಲಾಗಿದೆ. ಕೆಡಿಪಿ ಸಭೆಯಲ್ಲಿಯೂ ಸಹ ಅವರು ಹೊಸಪೇಟೆಗೆ ಹೋಗಲಿ ಎಂದು ಶಾಸಕರು ಆಗ್ರಹ ಮಾಡಿದ್ದಾರೆ. ವೈದ್ಯಾಧಿಕಾರಿ ಯಾಕೆ ಬದಲಾಗಬೇಕಿತ್ತು ಎಂಬುದನ್ನು ಕ್ಷೇತ್ರದ ಜನರಿಗೆ ಶಾಸಕರ ನಡೆ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.
ಮುಂದೆ ಅಧಿಕಾರ ಸ್ವೀಕರಿಸಿದವರು 26.11.2024 ರಂದು ರೂಪಾಯಿ 5.20 ಕೋಟಿ ರೂ.ಗಳ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆ ಕಳುಹಿಸುತ್ತಾರೆ. ಈ ರೀತಿ ವೈದ್ಯಕೀಯ ಉಪಕರಣಗಳಿಗೆ ಹಣ ಕಡಿತ ಮಾಡಿ ಪ್ರಸ್ತಾವನೆ ಕಳುಹಿಸುವ ಸಲುವಾಗಿಯೇ ವೈದ್ಯಾಧಿಕಾರಿಯನ್ನು ಬದಲಾಯಿಸಲಾಗಿದೆ ಎಂಬ ಅನುಮಾನ ಮೂಡುವಂತಾಗಿದೆ ಎಂದು ಹೇಳಿದರು..
ಇವೆಲ್ಲದರ ಕುರಿತು ನಾವು ಎರಡು ಬಾರಿ ಪತ್ರಿಕಾಗೋಷ್ಠಿ ಮಾಡಿ ಶಾಸಕರಿಂದ ಉತ್ತರ ಕೇಳಿದ್ದೇವೆ, ಆದರೆ ಉತ್ತರ ಇಲ್ಲ. ಆದರೆ ಶಾಸಕರು ಮಧ್ಯಮಗಳ ಮುಂದೆ ಉಪಕರಣಕ್ಕಾಗಿ 18.5 ಕೋಟಿ ರೂ.ಗಳಷ್ಟು ಹಣ ಬಂದಿದೆ ಎಂದು ಹೇಳಿದ್ದಾರೆ. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕ ಮಾಹಿತಿಯಿಂದ ಇದು ಸುಳ್ಳು ಎಂಬುದು ಗೊತ್ತಾಗಿದೆ. ಸಾಮಗ್ರಿಗಳಿಗಾಗಿ ಟೆಂಡರ್ ಕರೆಯಲಿಲ್ಲ ಎಂಬುದು ಕೂಡ ಮಾಹಿತಿ ಹಕ್ಕಿನ ಅಡಿ ಪಡೆಯಲಾದ ಮಾಹಿತಿಯಿಂದ ಗೊತ್ತಾಗಿದೆ. 80% ಕೆಲಸ ಮುಗಿದು ಐದು ತಿಂಗಳಾದರೂ ಸಹ ಈವರೆಗೆ ಟೆಂಡರ್ ಕರೆಯದಿರುವುದಕ್ಕೆ ಕಾರಣವೇನು..? ಈ ಹಿಂದೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತಿದ್ದ ಕಾಂಗ್ರೆಸ್ ಸರ್ಕಾರ, ಈಗ ಮಂಜೂರಾದ ಬಡವರಿಗೆ ಉಪಯೋಗ ಆಗುವ ಆಸ್ಪತ್ರೆಯನ್ನೇ ನಿರ್ಲಕ್ಷಿಸುತ್ತಿರುವುದು ಕ್ಷೇತ್ರದ ಜನತೆಗೆ ಮಾಡುವ ದೊಡ್ಡ ಮೋಸವಾಗಿದೆ. ಬಡವರಿಗಾಗಿ ಉಚಿತವಾಗಿ ಸಿಗಬಹುದಾಗಿದ್ದ ಹಾರ್ಟ್ ಆಪರೇಷನ್, ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮತ್ತಿತರ ವೈದ್ಯಕೀಯ ಉಪಕರಣದ ಪ್ರಸ್ತಾಪವನ್ನು ಕೈಬಿಟ್ಟಿರುವುದು ಅಕ್ಷಮ್ಯ ಎಂದರು.
ಈಗಲಾದರೂ ಶಾಸಕರು ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಬಳಿಗೆ ಹೋಗಿ ದಾಖಲೆಗಳನ್ನು ನೀಡಿ ಅವರಿಗೆ ಮನವರಿಕೆ ಮಾಡಿ ಈ ಮೊದಲು ಉದ್ದೇಶಿಸಿದ್ದ ಸ್ವರೂಪದಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಎಲ್ಲ ವೈದ್ಯಕೀಯ ಯಂತ್ರೋಪಕರಣಗಳನ್ನು ಆಸ್ಪತ್ರೆಗೆ ಒದಗಿಸುವುದನ್ನು ಖಾತ್ರಿ ಪಡಿಸಿ, ಜನರ ವಿಶ್ವಾಸ ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಶಾಸಕರ ಮೇಲಿನ ಗೌರವ ಮತ್ತು ವಿಶ್ವಾಸದ ಕಾರಣಕ್ಕೆ ಫೆಬ್ರುವರಿ 20ರ ವರೆಗೆ ಕಾಯುತ್ತೇವೆ. ಆಗಲೂ ಸಹ ಅವರು ಇದೇ ಈ ರೀತಿ ಮೌನ ವಹಿಸಿದರೆ, ನಾವು ಜನರ ಬಳಿಗೆ ಹೋಗಬೇಕಾಗುತ್ತದೆ. ಈ ವಿಚಾರವಾಗಿ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಮತ್ತು ಫೆ.20 ರ ನಂತರ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಈ ರೀತಿ ಬೀದಿ ಬೀದಿಯಲ್ಲಿ ಆಸ್ಪತ್ರೆ ಉಳಿಸಿ ಅಭಿಯಾನ ಪ್ರಾರಂಭಿಸುವುದು ಅನಿವಾರ್ಯವಾಗುವಂತೆ ಮಾಡಬೇಡಿ ಎಂದು ಹೇಳಿದರು.
ಜಿಲ್ಲಾ ಪಂಚಾತ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ ಮಾತನಾಡಿ, ಆಸ್ಪತ್ರೆ ವಿಚಾರದಲ್ಲಿ ಅನಂತಮೂರ್ತಿ ಹೆಗಡೆ ಅವರು ಎಲ್ಲ ದಾಖಲೆ, ಪ್ರಸ್ತುತ ಪರಿಸ್ಥಿತಿಯನ್ನು ಜನರೆದುರು ಇಟ್ಟಿದ್ದಾರೆ. ಇನ್ನಾದರೂ ಆಸ್ಪತ್ರೆಯ ಮೂಲ ರೂಪುರೇಷೆಗಳಂತೆ ನಿರ್ಮಾಣವಾಗಲು ಶಾಸಕ ಭೀಮಣ್ಣ ನಾಯ್ಕ ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ನಾಗರಾಜ ನಾಯ್ಕ ಮಾತನಾಡಿ, ಮಧ್ಯಮ ವರ್ಗ ಮತ್ತು ಬಡವರಿಗೆ ಆರೋಗ್ಯ ಸೇವೆ ನೀಡುವ ಕಾಳಜಿಯಿಂದ ಕಾಗೇರಿಯವರು ದೊಡ್ಡ ಆಸ್ಪತ್ರೆಯನ್ನು ಮಂಜೂರಿ ಮಾಡಿಸಿದ್ದರು. ಶಾಸಕ ಭೀಮಣ್ಣ ಅವರೂ ಈ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವಾನಂದ ದೇಶಳ್ಳಿ, ಪ್ರೇಮಕುಮಾರ ನಾಯ್ಕ, ರಂಗಪ್ಪ ದಾಸನಕೊಪ್ಪ ಮೊದಲಾದವರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ