ಆಗ್ರಾ : ಉತ್ತರ ಪ್ರದೇಶದ ಆಗ್ರಾದಲ್ಲಿ ಅಸಮಾಮಾನ್ಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ಎತ್ತರದ ಹಿಮ್ಮಡಿಯ (ಹೈ ಹೀಲ್ಸ್) ಚಪ್ಪಲಿ ಕೊಡಿಸಿಲ್ಲವೆಂದು ಮಹಿಳೆಯೊಬ್ಬಳು ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ…!
ಹೈ ಹೀಲ್ಸ್ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ ವಿಚ್ಛೇದನ ಹಂತಕ್ಕೆ ತಲುಪಿದ್ದು, ಇಲ್ಲಿ ಪತಿ ಪತ್ನಿಯರ ಮಧ್ಯೆ ಸಂಧಾನ ನಡೆಸಿ ಮನೆಗೆ ಕಳುಹಿಸಲಾಗಿದೆ. ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ದಂಪತಿಯ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅಲ್ಲಿ ಇಬ್ಬರಿಗೂ ಕೌನ್ಸಿಲಿಂಗ್ ಮಾಡಲಾಗಿದೆ. ಕಳೆದ 8 ತಿಂಗಳಿಂದ ಗಂಡ ತನಗೆ ಸುಳ್ಳು ಭರವಸೆ ನೀಡುತ್ತಿದ್ದಾನೆ, ಮದುವೆಯ ನಂತರ ಏನನ್ನೂ ತಂದಿಲ್ಲ ಎಂದು ಪತ್ನಿ ದೂರಿದ್ದಾಳೆ.
ಆಗ್ರಾ ಮೂಲದ ದಂಪತಿ 2024 ರಲ್ಲಿ ವಿವಾಹವಾಗಿದ್ದರು. ಮದುವೆಯಾದ ನಂತರ ದಂಪತಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಡುತ್ತಿದ್ದರು. ಹೆಂಡತಿಗೆ ಚಿಕ್ಕಂದಿನಿಂದಲೂ ಹೈ ಹೀಲ್ ಚಪ್ಪಲಿ ಹಾಕುವ ಹವ್ಯಾಸವಿತ್ತು, ಆದರೆ ಅವಳಿಗೆ ಪತಿ ಆ ಚಪ್ಪಲಿ ಕೊಡಿಸುತ್ತಿರಲಿಲ್ಲ. ಪ್ರತಿ ಬಾರಿಯೂ ಆತ ಏನಾದರೊಂದು ನೆಪ ಹೇಳುತ್ತಲೇ ಇದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ನಂತರ ಪತ್ನಿ ತನ್ನ ತಾಯಿಯ ಮನೆಗೆ ಬಂದಿದ್ದಾಳೆ. ಕಳೆದ ಒಂದು ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದಾಳೆ. ಈ ವೇಳೆ ಪೊಲೀಸ್ ದೂರು ದಾಖಲಿಸಿದ್ದಾಳೆ ಎಂದು ಹೇಳಲಾಗಿದೆ.
ಪೊಲೀಸ್ ದೂರು ಸಲ್ಲಿಸಿದ ನಂತರ ಈ ವಿಷಯ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಬಂತು. ನಂತರ ಇಬ್ಬರಿಗೂ ಕೌನ್ಸೆಲಿಂಗ್ ನಡೆಸಲಾಯಿತು. ಕೌಟುಂಬಿಕ ಸಲಹಾ ಕೇಂದ್ರ ತಲುಪಿದ ಪತಿ, ತನ್ನ ಪತ್ನಿಗೆ ಹೈ ಹೀಲ್ ಚಪ್ಪಲಿ ಧರಿಸಿದರೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾನೆ.
ಒಮ್ಮೆ ಗಂಡ ಅವಳಿಗೆ ಒಂದು ಜೋಡಿ ಎತ್ತರದ ಹಿಮ್ಮಡಿಯ ಚಪ್ಪಲಿ ಕೊಡಿಸಿದ್ದ, ಆದರೆ ಇದರಿಂದಾಗಿ ಅವಳು ಬಿದ್ದು ಗಾಯಗೊಂಡಳು. ಇದಾದ ನಂತರವೂ ಆಕೆ ಹೈ ಹೀಲ್ ಚಪ್ಪಲಿಗೆ ಬೇಡಿಕೆ ಇಟ್ಟಿದ್ದಾಳೆ. ಈ ವಿಚಿತ್ರ ಬೇಡಿಕೆಯಿಂದಾಗಿ ಆಕೆ ಮನೆಯಲ್ಲಿ ಊಟವನ್ನೂ ಮಾಡುತ್ತಿರಲಿಲ್ಲ ಎಂದು ಆತ ಹೇಳಿದ್ದಾನೆ ಎಂದು ಕೌಟುಂಬಿಕ ಸಲಹಾ ಕೇಂದ್ರದ ಆಪ್ತ ಸಮಾಲೋಚಕ ಡಾ.ಸತೀಶ ಖೀರವಾರ ತಿಳಿಸಿದ್ದಾರೆ.
ಪತ್ನಿಯ ಈ ಬೇಡಿಕೆ ಈಡೇರದ ಕಾರಣ ಮನೆಯಲ್ಲಿ ಊಟವನ್ನೂ ಮಾಡಿಲ್ಲ ಎನ್ನುತ್ತಾರೆ ಪತಿ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಅವಳು ಕೋಪಗೊಂಡು ತನ್ನ ತವರು ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಆದರೆ ಪತ್ನಿ ಹೇಳುವುದೇ ಬೇರೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದ ಎಂದು ಪತ್ನಿ ಹೇಳಿದ್ದಾಳೆ. ಈ ಕಾರಣಕ್ಕಾಗಿ ತಾನು ತನ್ನ ತವರು ಮನೆಗೆ ಬಂದಿದ್ದೇನೆ. ಮದುವೆಯ ನಂತರ ತಾನು ಕೇಳಿದ ಯಾವುದನ್ನೂ ಕೊಡಿಸಲಿಲ್ಲ ಎಂದು ಪತ್ನಿ ಹೇಳಿದ್ದಾಳೆ.
ಈಗ ಇಬ್ಬರಿಗೂ ಕೌನ್ಸೆಲಿಂಗ್ ನಡೆಸಿದ ನಂತರ ಇಬ್ಬರ ನಡುವಿನ ವಿವಾದ ಬಗೆಹರಿದಿದೆ ಎನ್ನುತ್ತಾರೆ ಆಪ್ತಸಮಾಲೋಚಕ ಡಾ.ಸತೀಶ ಖೀರವಾರ. ಈಗ ಅವಳ ಪತಿ ಅವಳಿಗೆ ಎತ್ತರದ ಹಿಮ್ಮಡಿಯ ಚಪ್ಪಲಿ ಕೊಡಿಸುವ ಭರವಸೆ ನೀಡಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ