ಬೆಂಗಳೂರು | ಕದ್ದ ಹಣದಿಂದ ಗರ್ಲ್‌ ಫ್ರಂಡ್‌ಗೆ 3 ಕೋಟಿ ಮೌಲ್ಯ ಮನೆ ಗಿಫ್ಟ್‌ ನೀಡಿದ್ದ ಖತರ್ನಾಕ ಕಳ್ಳ…!

ಬೆಂಗಳೂರು: ದರೋಡೆ ಮಾಡಿದ ಹಣದಲ್ಲಿ ತನ್ನ ಗೆಳತಿಗೆ 3 ಕೋಟಿ ರೂಪಾಯಿ ಮನೆ ಕಟ್ಟಿಸಿಕೊಟ್ಟ ಕಳ್ಳನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 37 ವರ್ಷದ ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದ್ದು, ಈತನಿಗೆ ಖ್ಯಾತ ಚಿತ್ರನಟಿಯೊಂದಿಗೂ ಸಂಪರ್ಕವಿತ್ತು ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಬೆಂಗಳೂರಿನ ಮಡಿವಾಳ ಪೊಲೀಸರು ದೀರ್ಘಕಾಲದ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದ ಈತನನ್ನು ಬಂಧಿಸಿದ್ದಾರೆ. ಆರೋಪಿ ಪಂಚಾಕ್ಷರಿ ಸ್ವಾಮಿ ಮಹಾರಾಷ್ಟ್ರದ ಸೊಲ್ಲಾಪುರ ಮೂಲದವನು. ಮದುವೆಯಾಗಿ ಮಗುವನ್ನು ಹೊಂದಿದ್ದರೂ, ಆತನಿಗೆ ಹಲವಾರು ಮಹಿಳೆಯರ ಸಹವಾಸವಿತ್ತು ಎನ್ನಲಾಗಿದೆ.
2003ರಲ್ಲಿ ಅಪ್ರಾಪ್ತನಾಗಿದ್ದಾಗಲೇ ಸ್ವಾಮಿ ಕಳ್ಳತನ ಮಾಡಲು ಆರಂಭಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. 2009 ರ ಹೊತ್ತಿಗೆ, ಆತ ವೃತ್ತಿಪರ ಕಳ್ಳನಾದ, ತನ್ನ ಅಪರಾಧಗಳ ಮೂಲಕ ಕೋಟಿ ಮೌಲ್ಯದ ಸಂಪತ್ತನ್ನು ಸಂಗ್ರಹಿಸಿದ. 2014-15ರಲ್ಲಿ ಖ್ಯಾತ ನಟಿಯೊಬ್ಬರ ಸಂಪರ್ಕಕ್ಕೆ ಬಂದು ಆಕೆಯೊಂದಿಗೆ ಪ್ರಣಯ ಸಂಬಂಧ ಬೆಳೆಸಿದ್ದ. ವಿಚಾರಣೆ ವೇಳೆ ಆರೋಪಿ ತಾನು ನಟಿಗಾಗಿ ಕೋಟಿಗಟ್ಟಲೆ ಖರ್ಚು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆಕೆಗಾಗಿ ಕೋಲ್ಕತ್ತಾದಲ್ಲಿ 3 ಕೋಟಿ ರೂಪಾಯಿ ವೆಚ್ಚದ ಮನೆ ನಿರ್ಮಿಸಿ, 22 ಲಕ್ಷ ರೂಪಾಯಿ ಮೌಲ್ಯದ ಅಕ್ವೇರಿಯಂ ಅನ್ನು ಉಡುಗೊರೆಯಾಗಿ ನೀಡಿದ್ದಾಗಿ ತಿಳಿಸಿದ್ದಾನೆ.

ಪ್ರಮುಖ ಸುದ್ದಿ :-   ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಗೆ 90 ವರ್ಷ ; 9 ದಿನ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

2016 ರಲ್ಲಿ, ಸ್ವಾಮಿಯನ್ನು ಗುಜರಾತ್ ಪೊಲೀಸರು ಬಂಧಿಸಿ ಆರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ಅಹಮದಾಬಾದ್‌ನ ಸಬರಮತಿ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದ ನಂತರ, ಆತ ಮತ್ತೆ ಕಳ್ಳತನ ಶುರು ಮಾಡಿದ್ದ. ನಂತರ ಇದೇ ರೀತಿಯ ಅಪರಾಧಗಳಿಗಾಗಿ ಮಹಾರಾಷ್ಟ್ರ ಪೊಲೀಸರು ಆತನನ್ನು ಬಂಧಿಸಿದ್ದರು. 2024 ರಲ್ಲಿ ಬಿಡುಗಡೆಯಾದ ನಂತರ, ಆತ ತನ್ನ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿದ್ದ, ಅಲ್ಲಿ ಅತ ಮನೆ ಕಳ್ಳತನವನ್ನು ಪುನರಾರಂಭಿಸಿದ್ದ.
ಜನವರಿ 9 ರಂದು ಬೆಂಗಳೂರಿನ ಮಡಿವಾಳ ಬಡಾವಣೆಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಗುಪ್ತಚರ ಮಾಹಿತಿ ಸಂಗ್ರಹಿಸಿದ ಪೊಲೀಸರು ಮಡಿವಾಳ ಮಾರುಕಟ್ಟೆ ಪ್ರದೇಶದ ಬಳಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ತನ್ನ ಸಹಚರನ ಜತೆ ಸೇರಿ ಬೆಂಗಳೂರಿನಲ್ಲಿ ಅಪರಾಧ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕದ್ದ ಚಿನ್ನವನ್ನು ಕರಗಿಸಿ ಚಿನ್ನದ ಬಿಸ್ಕೆಟ್‌ಗಳನ್ನಾಗಿ ಪರಿವರ್ತಿಸಲು ಬಳಸುತ್ತಿದ್ದ ಕಬ್ಬಿಣದ ರಾಡ್ ಮತ್ತು ಫೈರ್ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕದ್ದ ಚಿನ್ನಾಭರಣಗಳಿಂದ ತಯಾರಿಸಿದ ಚಿನ್ನ ಮತ್ತು ಬೆಳ್ಳಿ ಬಿಸ್ಕೆಟ್‌ಗಳನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ತಮ್ಮ ನಿವಾಸದಲ್ಲಿ ಇಟ್ಟಿರುವುದಾಗಿ ಸ್ವಾಮಿ ಬಹಿರಂಗಪಡಿಸಿದ್ದಾರೆ. 181 ಗ್ರಾಂ ಚಿನ್ನದ ಬಿಸ್ಕತ್‌ಗಳು, 333 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಆಭರಣ ಕರಗಿಸಲು ಬಳಸಿದ ಫೈರ್ ಗನ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಪರಾಧಗಳನ್ನು ಮಾಡಿದ ನಂತರ, ಅನುಮಾನ ಬರದಂತೆ ಮಾಡಲು ಆತ ರಸ್ತೆಯ ಮೇಲೆ ಬಟ್ಟೆ ಬದಲಾಯಿಸುತ್ತಿದ್ದ ಎಂಬುದನ್ನು ಪೊಲೀಸರು ಕಂಡುಹಿಡಿದರು.

ಪ್ರಮುಖ ಸುದ್ದಿ :-   ಸಾವಿನ ನಂತರವೂ ಮಕ್ಕಳು, ಮೊಮ್ಮಕ್ಕಳೊಡನೆ ಮಾತಾಡಬಹುದು...! ಭವಿಷ್ಯ ನುಡಿದ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ಥ್ರೂನ್

ಆತ ಕರಾಟೆಯಲ್ಲಿ ಬ್ಲ್ಯಾಕ್‌ ಬೆಲ್ಟ್‌ ಆಗಿದ್ದ. ಆತನ ತಂದೆಯ ಮರಣದ ನಂತರ, ತಾಯಿ ರೈಲ್ವೆ ಇಲಾಖೆಯಲ್ಲಿಅನುಕಂಪದ ಆದಾರದಲ್ಲಿ ಕೆಲಸ ಪಡೆದಿದ್ದರು. ಸ್ವಾಮಿ ತಮ್ಮ ತಾಯಿಯ ಹೆಸರಿನಲ್ಲಿದ್ದ ಮನೆ ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ, ಸಾಲ ಮರುಪಾವತಿಯಾಗದ ಕಾರಣ ಬ್ಯಾಂಕೊಂದು ಹರಾಜು ನೋಟಿಸ್ ಜಾರಿ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಸಿಪಿ (ಈಶಾನ್ಯ) ಸಾರಾ ಫಾತಿಮಾ, ಮಡಿವಾಳ ಎಸಿಪಿ ಲಕ್ಷ್ಮೀನಾರಾಯಣ ಕೆ.ಸಿ., ಮತ್ತು ಮಡಿವಾಳ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೊಹಮ್ಮದ್ ಎಂ.ಎ ನೇತೃತ್ವದ ತಂಡವು ಪ್ರಕರಣವನ್ನು ಭೇದಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement