ನವದೆಹಲಿ : ಇಡೀ ದೇಶದ ಕುತೂಹಲ ಕೆರಳಿಸಿದ ದೆಹಲಿ ವಿಧಾಸಭಾ ಚುನಾಣೆಯಲ್ಲಿ ಬಿಜೆಪಿ (BJP) ಬಹುಮತ ಪಡೆದಿದ್ದು, 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿದೆ.
70 ಸ್ಥಾನಗಳ ಪೈಕಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದ ನಂತರ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದರು. ಬಳಿಕ ನೆರೆದಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಕಾರ್ಯಕರ್ತನೊಬ್ಬ ಅಸ್ವಸ್ಥನಾಗಿದ್ದನ್ನು ವೇದಿಕೆ ಮೇಲಿನಿಂದಲೇ ಗಮನಿಸಿದ ಮೋದಿ ತಮ್ಮ ಭಾಷಣವನ್ನು ಸ್ವಲ್ಪ ಹೊತ್ತು ತಡೆದು, ಆತನಿಗೆ ನೀರು ನೀಡುವಂತೆ ಆತನ ಪಕ್ಕದಲ್ಲಿದ್ದವರಿಗೆ ಸೂಚಿಸಿದರು.
ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವಾಗ, ವೇದಿಕೆಯ ಸಮೀಪವಿರುವ ಸಾಲಿನಲ್ಲಿ ಕುಳಿತಿದ್ದ ಪಕ್ಷದ ಕಾರ್ಯಕರ್ತರೊಬ್ಬರು ಅಸ್ವಸ್ಥಗೊಂಡಿರುವುದನ್ನು ಅವರು ಗಮನಿಸಿದರು.
ಕೂಡಲೇ ತಮ್ಮ ಮಾತನ್ನು ಅಷ್ಟಕ್ಕೆ ನಿಲ್ಲಿಸಿದ ಮೋದಿ, ʼʼಅವರು ನಿದ್ದೆ ಮಾಡುತ್ತಿದ್ದಾರಾ? ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾರಾ? ಎಂದು ಪ್ರಶ್ನಿಸಿದರು. ಡಾಕ್ಟರ್ ಕೂಡಲೇ ಅವರನ್ನು ಪರೀಕ್ಷಿಸಿ. ಅವರಿಗೆ ಸ್ವಲ್ಪ ನೀರು ಕೊಡಿ. ಅಲ್ಲಿದ್ದವರು ಅವರನ್ನು ಗಮನಿಸಿʼʼ ಎಂದು ಪಕ್ಕದಲ್ಲಿದ್ದವರಿಗೆ ಸೂಚಿಸಿದರು. ನೀರು ಕುಡಿದ ಆತ ಸುಧಾರಿಸಿಕೊಂಡಿರುವುದಾಗಿ ತಿಳಿಸಿದ ಬಳಿಕ ಮೋದಿ ತಮ್ಮ ಮಾತು ಮುಂದುವರಿಸಿದರು.
“ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ದೆಹಲಿ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಬಿಜೆಪಿ ಸರ್ಕಾರವಿದೆ. ಈ ಕಾಕತಾಳೀಯ ಬೆಳವಣಿಗೆ ಅಭಿವೃದ್ಧಿಯ ಅಸಂಖ್ಯಾತ ಸಾಧ್ಯತೆಗಳನ್ನು ತೆರೆದುಕೊಳ್ಳಲು ನೆರವಾಗಲಿದೆ. ಈ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಆಪ್ ವಿರುದ್ಧ ವಾಗ್ದಾಳಿ
ಇದೇ ವೇಳೆ ಮೋದಿ ಅವರು ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಆಪ್ ಸರ್ಕಾರ ಪವಿತ್ರ ಯಮುನಾ ನದಿಯನ್ನು ಅಪವಿತ್ರಗೊಳಿಸಿದೆ ಎಂದು ಆರೋಪಿಸಿದರು. ʼʼತಾಯಿ ಯಮುನಾ ನಮ್ಮ ಆಧ್ಯಾತ್ಮಿಕತೆಯ ಸಂಕೇತ. ಆಕೆಯ ಆಶೀರ್ವಾದ ಯಾವತ್ತೂ ನಮ್ಮ ಮೇಲಿರಲಿ ಎಂದು ನಾವೆಲ್ಲ ಆಶೀಸುತ್ತೇವೆ. ಆದರೆ ಆಪ್ ನಾಯಕರು ತಾಯಿ ಯಮುನಾ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ದೆಹಲಿಯ ಜನರ ನಂಬಿಕೆಗಳನ್ನು ಆಪ್ ನಾಯಕರು ಉಳಿಸಿಕೊಂಡಿಲ್ಲ, ನಂತರ ಯಮುನಾ ಕಲುಷಿತಗೊಳ್ಳಲು ಹರಿಯಾಣ ಕಾರಣ ಎಂದು ಆರೋಪಿಸುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ