ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮೇಲೆ ಶಿರಸಿಯ ಕಾಂಗ್ರೆಸ್ ಮುಖಂಡರು ದಾಖಲಿಸಿದ್ದ ಪ್ರಕರಣದ ತನಿಖೆಗೆ ಶುಕ್ರವಾರ ಧಾರವಾಡದ ಹೈಕೋರ್ಟ್ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಅನಂತಮೂರ್ತಿ ಹೆಗಡೆಯವರು ಮಾಹಿತಿ ನೀಡಿದ್ದಾರೆ. ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಅನಂತಮೂರ್ತಿ ಹೆಗಡೆಯವರು ಕೋರ್ಟ್ ಮೆಟ್ಟಿಲೇರಿದ್ದರು.
ಶಿರಸಿಯಲ್ಲಿ ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅನಂತಮೂರ್ತಿ ಹೆಗಡೆ, ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ ಖರೀದಿಗಾಗಿ 18.5 ಕೋಟಿ ರೂ.ಗಳಷ್ಟು ಹಣ ಬಂದಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದು ಸುಳ್ಳು ಹೇಳಿಕೆಯಾಗಿದೆ. ಹಾಗಾಗಿ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಇದ್ದರೆ ಅದನ್ನು ಭೀಮಣ್ಣ ಅವರಿಗೆ ನೀಡಬಹುದು ಎಂದು ಹೇಳಿದ್ದರು. ಆದರೆ, ಕಾಂಗ್ರೆಸಿಗರು, ಅವರ ಹೇಳಿಕೆಯನ್ನು ತಿರುಚಿ, ಅವರ ಮೇಲೆ ವಿನಾಕಾರಣ ಜಾಮೀನು ರಹಿತ (ನಾನ್ ಬೇಲೇಬಲ್ ) ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅನಂತಮೂರ್ತಿ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಾದವನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳು ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಅನಂತಮೂರ್ತಿ ಹೆಗಡೆ ಪರವಾಗಿ ವಕೀಲ ಸೌರಭ ಹೆಗಡೆ ವಾದ ಮಂಡಿಸಿದ್ದರು.
ಈ ಬಗ್ಗೆ ಅನಂತಮೂರ್ತಿ ಹೆಗಡೆ ಪ್ರತಿಕ್ರಿಯಿಸಿದ್ದು, ನಾನು ಕ್ಷೇತ್ರದ ಬಡ ಜನರ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದು, ಶಾಸಕರ ಬಳಿ ಸತ್ಯ ಹೇಳಿ ಎಂದು ಕೇಳಿದ್ದಕ್ಕೆ ಪ್ರಕರಣ ದಾಖಲಿಸಲಾಗಿದೆ. ಈಗಲಾದರೂ ಶಾಸಕ ಭೀಮಣ್ಣ ನಾಯ್ಕ ಅವರು ಆಸ್ಪತ್ರೆ ವಿಚಾರದಲ್ಲಿ ಸತ್ಯ ಹೇಳಲಿ ಎಂದು ಒತ್ತಾಯಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ