ರಾಯ್ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭಾನುವಾರ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ 31 ನಕ್ಸಲೀಯರು ಹತರಾಗಿದ್ದಾರೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಹತ್ಯೆಯಾದ ಇಬ್ಬರು ಭದ್ರತಾ ಸಿಬ್ಬಂದಿಗಳಲ್ಲಿ ಒಬ್ಬರು ರಾಜ್ಯ ಪೊಲೀಸ್‌ನ ಜಿಲ್ಲಾ ಮೀಸಲು ಗಾರ್ಡ್‌ಗೆ ಸೇರಿದವರು ಮತ್ತು ಇನ್ನೊಬ್ಬರು ವಿಶೇಷ ಕಾರ್ಯಪಡೆಗೆ ಸೇರಿದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ವಿವಿಧ ಭದ್ರತಾ ಪಡೆಗಳ ಜಂಟಿ ಸಿಬ್ಬಂದಿಗಳು ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.
ಬಿಜಾಪುರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಒಟ್ಟು 31 ನಕ್ಸಲೀಯರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಬಸ್ತಾರ್ ಐಜಿ ಪಿ ಸುಂದರರಾಜ ತಿಳಿಸಿದ್ದಾರೆ.
ಅವರೆಲ್ಲರ ಮೃತದೇಹಗಳು ಪತ್ತೆಯಾಗಿವೆ. ಅವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಿಂದ ಅಪಾರ ಪ್ರಮಾಣದ ಎಕೆ-47, ಎಸ್‌ಎಲ್‌ಆರ್, ಐಎನ್‌ಎಸ್‌ಎಎಸ್ ರೈಫಲ್‌ಗಳು, .303, ಬಿಜಿಎಲ್ ಲಾಂಚರ್ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಾಯಗೊಂಡಿರುವ ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಹೆಚ್ಚುವರಿ ಪಡೆಗಳನ್ನು ಬಲವರ್ಧನೆಯಾಗಿ ಕಳುಹಿಸಲಾಗಿದೆ ಮತ್ತು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ