ಬೀದರ: ಬೀದರಿನಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ಹಣದ ಪೆಟ್ಟಿಗೆಯನ್ನು ಹೊತ್ತೊಯ್ದ ಇಬ್ಬರು ದರೋಡೆಕೋರರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಹಣವನ್ನು ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬೀದರ ನಗರದಲ್ಲಿ ಜನವರಿ 16ರಂದು ದುಷ್ಕರ್ಮಿಗಳು ಹಾಡುಹಗಲೇ ನಡು ರಸ್ತೆಯಲ್ಲಿಯೇ ಗುಂಡಿನ ದಾಳಿ ನಡೆಸಿ 93 ಲಕ್ಷ ರೂ. ನಗದು ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದರು.ಈ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಈ ಕೃತ್ಯ ಎಸಗಿದವರ ಗುರುತನ್ನು ಇಲಾಖೆ ಪತ್ತೆ ಹಚ್ಚಿದ್ದು, ಈಗ ಅವರ ಫೋಟೋಗಳನ್ನು ಬಿಡುಗಡೆ ಮಾಡಿದೆ. ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಅಮನ್ ಕುಮಾರ ಹಾಗೂ ಅಲೋಕಕುಮಾರ ಅಲಿಯಾಸ ಅಶುತೋಷ ಎಂಬುವವರೇ ದರೋಡೆಕೋರ ಕೃತ್ಯದಲ್ಲಿ ಪಾಲ್ಗೊಂಡವರು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಪೊಲೀಸ್ ಇಲಾಖೆಯಿಂದ ಬೀದರ ದರೋಡೆ ದುಷ್ಕೃತ್ಯ ನಡೆದು ಒಂದು ತಿಂಗಳ ನಂತರ ಹಂತಕರ ಸಂಪೂರ್ಣ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಹಿಂದೆಯೂ ಈ ದುಷ್ಕರ್ಮಿಗಳು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ದರೋಡೆ ಎಸಗಿದ್ದರು ಎಂಬುದು ಗೊತ್ತಾಗಿದೆ. ಈಗ ಪೊಲೀಸರು ಇವರ ಸುಳಿವು ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ
ಕಳೆದ ತಿಂಗಳು ಜನವರಿ 16ರಂದು ಎಟಿಎಂಗೆ ಹಣ ತುಂಬಿಸಲು ಖಾಸಗಿ ಏಜೆನ್ಸಿಯ ವಾಹನವೊಂದು ಬ್ಯಾಂಕ್ ಎಟಿಎಂ ಮುಂದೆ ನಿಂತುಕೊಂಡಿತ್ತು. ಆಗ ವಾಹನದ ಒಳಗಿದ್ದ ಹಣದ ಪೆಟ್ಟಿಗೆಯನ್ನು ಹಿಡಿದು ಎಟಿಎಂ ಒಳಗೆ ಹೋಗುವಾಗ ಅಲ್ಲಿಯೇ ಕಾಯುತ್ತಿದ್ದ ಹಂತಕರು ಬಂದೂಕು ಹಿಡಿದು ಪೆಟ್ಟಿಗೆ ಕಸಿದುಕೊಳ್ಳಲು ಮುಂದಾಗಿದ್ದಾರೆ. ಹಣ ತಂದ ಸಿಬ್ಬಂದಿ ಪ್ರತಿರೋಧ ಒಡ್ಡಿದಾಗ ಸೆಕ್ಯೂರಿಟಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಹಣದ ಪೆಟ್ಟಿಗೆಯನ್ನು ಹೊತ್ತುಕೊಂಡು ಬೈಕ್‌ನಲ್ಲಿ ಇಟ್ಟುಕೊಂಡು ಪರಾರಿ ಆಗಿದ್ದಾರೆ. ನಂತರ ಇಲ್ಲಿಂದ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಬೇರೆಡೆಗೆ ಪರಾರಿ ಆಗಿದ್ದಾರೆ. ಈಗ ಅವರು ಎಲ್ಲಿದ್ದಾರೆಂದು ಪತ್ತೆ ಹಚ್ಚಲು ಅವರ ಬಗ್ಗೆ ಸುಳಿವು ಕೊಟ್ಟವರಗೆ 5 ಲಕ್ಷ ರೂ. ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ