ನವದೆಹಲಿ : ರೇಖಾ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪರ್ವೇಶ ವರ್ಮಾ ಉಪಮುಖ್ಯಮಂತ್ರಿಯಾಗಲಿದ್ದಾರೆ.
ದೆಹಲಿಯಲ್ಲಿ ಬುಧವಾರ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಇಬ್ಬರೂ ನಾಯಕರ ಹೆಸರನ್ನು ಘೋಷಿಸಲಾಯಿತು.ಪ್ರಸ್ತುತ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಪೈಕಿ ರೇಖಾ ಗುಪ್ತಾ ಅವರು ಏಕೈಕ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ದೆಹಲಿ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಅವರು 68,200 ಮತಗಳಿಂದ ಜಯಗಳಿಸಿದ್ದಾರೆ. ಪರ್ವೇಶ ವರ್ಮಾ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರನ್ನು ಸೋಲಿಸಿ ಆಯ್ಕೆಯಾಗಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವ ಬಹುಮತ ಗಳಿಸಿದ್ದು, ಆಮ್ ಆದ್ಮಿ ಪಕ್ಷದ (ಎಎಪಿ) ದಶಕದ ಆಡಳಿತವನ್ನು ಕೊನೆಗೊಳಿಸಿತು. ಆಮ್ ಆದ್ಮಿ ಪಕ್ಷವು ಕೇವಲ 22 ಸ್ಥಾನಗಳನ್ನು ಗೆಲ್ಲುವಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಗುರುವಾರ ಮಧ್ಯಾಹ್ನದ ರಾಮಲೀಲಾ ಮೈದಾನದಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಭಾಗವಹಿಸುವ ಸಾಧ್ಯತೆಯಿದೆ.
ರೇಖಾ ಗುಪ್ತಾ ಯಾರು..?
ಗುಪ್ತಾ, ದೆಹಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಒಕ್ಕೂಟದ (DUSU) ಮಾಜಿ ಅಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿ. ದೆಹಲಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರು 1992 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ದೌಲತ್ ರಾಮ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮೂಲಕ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 1996-97 ರಲ್ಲಿ, ಅವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (DUSU) ಅಧ್ಯಕ್ಷರಾದರು, 2007 ರಲ್ಲಿ ಉತ್ತರ ಪಿತಾಂಪುರದಿಂದ ಕೌನ್ಸಿಲರ್ ಆಗಿ ಆಯ್ಕೆಯಾದ ಅವರು ಗ್ರಂಥಾಲಯಗಳು, ಉದ್ಯಾನವನಗಳು ಮತ್ತು ಈಜುಕೊಳಗಳಂತಹ ಸಾರ್ವಜನಿಕ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಕೆಲಸ ಮಾಡಿದರು.
ಅವರು 2012 ರಲ್ಲಿ ಮರು ಆಯ್ಕೆಯಾದರು ಮತ್ತು ನಂತರ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC) ನ ಮೇಯರ್ ಆಗಿ ಸೇವೆ ಸಲ್ಲಿಸಿದರು. ರೇಖಾ ಗುಪ್ತಾ ಅವರು ಆರ್ಥಿಕವಾಗಿ ದುರ್ಬಲವಾದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಲು “ಸುಮೇಧಾ ಯೋಜನೆ” ಯನ್ನು ಪ್ರಾರಂಭಿಸಿದರು. ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿ, ಅವರು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡಿದರು. ಅವರ ಕುಟುಂಬವು ಸಾರ್ವಜನಿಕ ಕಲ್ಯಾಣಕ್ಕೆ ಒತ್ತು ನೀಡಿದ್ದರಿಂದ ಸಮಾಜ ಸೇವೆಯಲ್ಲಿ ಅವರು ತೊಡಗಿಸಿಕೊಂಡರು.
ನಿಮ್ಮ ಕಾಮೆಂಟ್ ಬರೆಯಿರಿ