ಶಿರಸಿ: ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಯ ಬಗ್ಗೆ ನಾನು ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಭೀಮಣ್ಣ ನಾಯ್ಕ ಅವರು ನನಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಸ್ಪತ್ರೆ ವಿಚಾರದಲ್ಲಿ ಶಾಸಕರನ್ನು ಪ್ರಶ್ನಿಸಿದ್ದಕ್ಕೆ ನನ್ನ ಪ್ರತಿಕೃತಿ ದಹಿಸಿದ್ದಾರೆ, ನನ್ನ ಮೇಲೆ ನಾನ್ ಬೇಲೇಬಲ್ ಕೇಸ್ ಹಾಕಿಸಿದ್ದಾರೆ. ಇದಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ನಂತರ ಈಗ ಮೊಕದ್ದಮೆ ದಾಖಲಿಸುವ ಬಗ್ಗೆ ಲೀಗಲ್ ನೋಟೀಸ್ ನೀಡುವ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಬೆದರಿಕೆ ಒಡ್ಡುವ ತಂತ್ರ ಮಾಡುತ್ತಿದ್ದಾರೆ. ಅವರು ನನ್ನನ್ನು ಬಂಧಿಸಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಇದ್ಯಾವುದಕ್ಕೂ ನಾನು ಬಗ್ಗುವುದಿಲ್ಲ, ಕ್ಷೇತ್ರದ ಜನಸಾಮಾನ್ಯರ ಒಳಿತಿಗಾಗಿ ಬೀದಿಗಿಳಿದು ಹೋರಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಶಾಸಕರಿಗೆ ಪ್ರಶ್ನೆ ಕೇಳಿದರೂ, ವಿನಂತಿ ಮಾಡಿದರೂ ಈ ಕುರಿತಾಗಿ ತುಟಿ ಬಿಚ್ಚುವ ಸೌಜನ್ಯವನ್ನು ಶಾಸಕರು ತೋರಿಲ್ಲ. ವಿವಿಧ ಪತ್ರಿಕೆಯಲ್ಲಿ ಶಾಸಕರ ದ್ವಂದ್ವ ಹೇಳಿಕೆಯನ್ನು ಪ್ರಶ್ನಿಸಿದರೆ ನನ್ನ ಮೇಲೆ ನಾನ್ ಬೇಲೇಬಲ್ ಪ್ರಕರಣವನ್ನು ಶಾಸಕರ ಬೆಂಬಲಿಗರು ದಾಖಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಡಿಲೇರಿದ್ದು,, ಹೈಕೋರ್ಟ್ ಆ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿದೆ. ಇದರ ನಂತರ ನನ್ನ ಮೇಲೆ ಮಾನನಷ್ಟ ಮೊಕದ್ದಮ್ಮೆ ದಾಖಲಿಸುವುದಾಗಿ ನೋಟೀಸ್ ನೀಡಿರುವುದುಶಾಸಕರಿಗೆ ಶೋಭೆ ತರಲಾರದು ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಪ್ರಶ್ನೆ ಮಾಡಿದ ಕ್ಷೇತ್ರದ ಮತದಾರನ ಮೇಲೆ ಕೇಸ್ ದಾಖಲಿಸುವುದು, ಲೀಗಲ್ ನೋಟೀಸ್ ಕಳುಹಿಸುವುದರ ಬದಲು ಮೊದಲು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುವ ಕೆಲಸ ಮಾಡಲಿ. ಈ ರೀತಿ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ಎಂದಿಗೂ ಯಶಸ್ವಿಯಾಗದು. ಯಾವುದೇ ಬೆದರಿಕೆಗೆ, ನೋಟೀಸಿಗೆ ನಾನು ಹೆದರುವುದಿಲ್ಲ. ಎಲ್ಲ ರೀತಿಯ ಕಾನೂನು ಹೋರಾಟಕ್ಕೆ ನಾನು ಸಿದ್ಧನಿದ್ದು, ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಶಿರಸಿ ಆಸ್ಪತ್ರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿತ್ತೇನೆ. . ಶಾಸಕರು ಉತ್ತರ ಕೊಡುವ ಸ್ಥಾನದಲ್ಲಿದ್ದಾರೆ. ಹೀಗಾಗಿ ನಾನು ಅವರಿಂದ ಉತ್ತರ ಕೇಳಿದ್ದೇನೆ. ನಾನು ಶಾಸಕರ ವೈಯಕ್ತಿಕ ಆಸ್ತಿಯ ಬಗ್ಗೆ ಮಾಹಿತಿ ಕೇಳುತ್ತಿಲ್ಲ. ಆಸ್ಪತ್ರೆ ಸಾರ್ವಜನಿಕರ ಆಸ್ತಿಯಾಗಿದೆ. ಹಾಗಾಗಿ ಕೇಳಿದ್ದೇನೆ. ಇದಕ್ಕೆ ಈ ರೀತಿ ಮಾಡುವ ಬದಲು ಕ್ಷೇತ್ರದ ಜನರಿಗೆ ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ