ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀತಿ ಬೂರಾ ಅವರು ವರದಕ್ಷಿಣೆಗಾಗಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಏಷ್ಯಾಡ್ ಕಂಚಿನ ವಿಜೇತ ಕಬಡ್ಡಿ ಆಟಗಾರ ಪತಿ ದೀಪಕ ಹೂಡಾ ವಿರುದ್ಧ ಹರಿಯಾಣದ ಹಿಸಾರ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಪತಿ ಹಾಗೂ ಪತ್ನಿ ಇಬ್ಬರೂ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದು, ಹಿಸಾರ್ ಮತ್ತು ರೋಹ್ಟಕ್ ಪೊಲೀಸ್ ಠಾಣೆಗಳಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಹೂಡಾ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ತನ್ನ ಕುಟುಂಬದವರಿಗೆ ವರದಕ್ಷಿಣೆಯಾಗಿ ಎಸ್‌ಯುವಿ ಹಾಗೂ 1 ಕೋಟಿ ರೂ.ಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ಸವೀತಿ ಬೂರಾ ಆರೋಪಿಸಿದ್ದಾರೆ, ಮತ್ತೊಂದೆಡೆ ದೀಪಕ ಹೂಡಾ ಅವರು ಸವೀತಿ ಬೂರಾ ಅವರ ಕುಟುಂಬವು ತನ್ನ ಆಸ್ತಿಯನ್ನು ಕಬಳಿಸಿದೆ ಮತ್ತು ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಪತಿ ದೀಪಕ ಹೂಡಾ ವಿರುದ್ಧ ಸವೀತಿ ಬೂರಾ ನೀಡಿದ ದೂರಿನ ಆಧಾರದ ಮೇಲೆ ಫೆಬ್ರವರಿ 25 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿಸಾರ್‌ನ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸೀಮಾ ಗುರುವಾರ ಹೇಳಿದ್ದಾರೆ. ಹೂಡಾ ವಿರುದ್ಧ ಹೊರಿಸಲಾದ ಆರೋಪಗಳ ಹಿಂದಿನ ಕಾರಣಗಳನ್ನು ಸಹ ಎಸ್‌ಎಚ್‌ಒ ಬಹಿರಂಗಪಡಿಸಿದರು, “ಹೆಚ್ಚಿನ ವರದಕ್ಷಿಣೆಗಾಗಿ” ಚಿತ್ರಹಿಂಸೆ ನೀಡಲಾಗಿದೆ ಮತ್ತು ಹಲ್ಲೆಗಳನ್ನು ಮಾಡಲಾಗಿದೆ ಎಂದು ಆರೋಪಗಳು ದೂರನಲ್ಲಿದೆ ಎಂದು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಈ ಸೆಕ್ಷನ್ ಮಹಿಳೆಗೆ ಕ್ರೌರ್ಯ ನೀಡುವ ಪತಿಗೆ ಸಂಬಂಧಿಸಿದೆ.
ಹೂಡಾ ಅವರು ಅಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ವರದಿಯಾಗಿದೆ. “ನಾವು ಅವರಿಗೆ 2-3 ಬಾರಿ ನೋಟಿಸ್ ನೀಡಿದ್ದೇವೆ, ಆದರೆ ಅವರು ಹಾಜರಾಗಲಿಲ್ಲ” ಎಂದು ಎಸ್‌ಎಚ್‌ಒ (SHO) ಹೇಳಿದ್ದಾರೆ.
ಆಘಾತದಿಂದಾಗಿ ಆರೋಗ್ಯ ಹದಗೆಟ್ಟಿದೆ” ಎಂದು ಉಲ್ಲೇಖಿಸುವ ಮೂಲಕ ಹೂಡಾ ತಾನು ವಿಚಾರಣೆಗೆ ಗೈರಾಗಿದ್ದಕ್ಕೆ ಸಮರ್ಥಿಸಿಕೊಂಡಿದ್ದಾರೆ.
“ನಾನು ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದ್ದೇನೆ ಮತ್ತು ನಂತರದ ದಿನಾಂಕವನ್ನು ಕೋರಿದ್ದೇನೆ. ನಾನು ಖಂಡಿತವಾಗಿಯೂ ಅಲ್ಲಿಗೆ (ಪೊಲೀಸ್ ಠಾಣೆಗೆ) ಹೋಗುತ್ತೇನೆ, ಆದರೆ ನನ್ನ ಹೆಂಡತಿಯ ವಿರುದ್ಧ ನಾನು ನಕಾರಾತ್ಮಕ ಕಾಮೆಂಟ್ ಮಾಡುವುದಿಲ್ಲ. ಆಕೆಯನ್ನು ಭೇಟಿಯಾಗಲು ನನಗೆ ಅವಕಾಶ ನೀಡಿಲ್ಲ ಎಂದು ಹೂಡಾ ತಿಳಿಸಿದ್ದಾರೆ.ಇವರಿಬ್ಬರು ಜುಲೈ 7, 2022 ರಂದು ವಿವಾಹವಾದರು, ಈಗ ಅವರ ಸಂಬಂಧವು ಹದಗೆಟ್ಟಿದೆ.
2023 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸವೀತಿ ಬೂರಾ ಚಿನ್ನದ ಪದಕ ಗೆದ್ದಿದ್ದಾರೆ. ಜನವರಿ 2025 ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೂಡಾ 2016 ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು 2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಕಬಡ್ಡಿ ತಂಡದಲ್ಲಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ