ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೌಸಿಂಗ್ ಸೊಸೈಟಿಯೊಂದರಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಕಾರು ಡಿಕ್ಕಿ ಹೊಡೆದು ಅದು ತೀವ್ರವಾಗಿ ಗಾಯಗೊಂಡಿದೆ.
ಫೆಬ್ರವರಿ 24 ರಂದು ಸಂಜೆ 4:30 ರ ಸುಮಾರಿಗೆ ಗಾಜಿಯಾಬಾದ್‌ನ ರಾಜೇಂದ್ರ ನಗರ ವಿಸ್ತರಣೆಯಲ್ಲಿರುವ ಎಸ್‌ಜಿ ಗ್ರ್ಯಾಂಡ್ ಸೊಸೈಟಿಯಲ್ಲಿ ಸಂಭವಿಸಿದ ಘಟನೆಯ ನಂತರ ಕಾರು ಚಲಾಯಿಸುತ್ತಿದ್ದ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ಇಡೀ ಘಟನೆಯು ಸೊಸೈಟಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿಳಿ ಬಣ್ಣದ ಹೋಂಡಾ ಸಿಟಿ ಕಾರು ಸೊಸೈಟಿ ಪ್ರವೇಶಿಸಿ ಕ್ಯಾಂಪಸ್‌ನೊಳಗೆ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದು ಹೋಗುವುದನ್ನು ತೋರಿಸಿದೆ. ವಾಹನದ ಮುಂದಿನ ಚಕ್ರ ಮಗುವಿನ ದೇಹದ ಮೇಲೆ ಹರಿದಿದೆ. ತೀವ್ರ ಗಾಯಗಳಾದರೂ ಮಗು ಪವಾಡ ಸದೃಶವಾಗಿ ಬದುಕುಳಿದಿದೆ.
ಸಂಧ್ಯಾ ಎಂದು ಗುರುತಿಸಲಾದ ವಾಹನ ಚಲಾಯಿಸುತ್ತಿದ್ದ ಮಹಿಳೆ ತನ್ನ ಕಾರನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ಮಗುವನ್ನು ಪರೀಕ್ಷಿಸಲು ಕಾರಿನಿಂದ ಹೊರಬಂದದ್ದನ್ನು ದೃಶ್ಯಾವಳಿ ತೋರಿಸಿದೆ. ಆದರೆ, ಮರು ಕ್ಷಣವೇ ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಘಟನೆ ಬಳಿಕ ಮಗುವಿನ ತಂದೆ ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ಬಲ ತೊಡೆಯ ಮೂಳೆ ಮುರಿತ, ಬಲಗೈ, ಎಡಗಾಲು ಮತ್ತು ಬೆನ್ನಿನ ಮೇಲೆ ಅನೇಕ ಗಾಯಗಳು ಸೇರಿದಂತೆ ಗಂಭೀರವಾದ ಗಾಯಗಳಾಗಿವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಸದ್ಯ ಐದು ಬಾಲಕಿ ವಸುಂಧರಾದ ಅಟ್ಲಾಂಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ವಾಹನ ಚಲಾಯಿಸುತ್ತಿದ್ದ ಮಹಿಳೆ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 281 ಮತ್ತು 125 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ