ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಾತ್ರೆಯಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕೆಲವರು ಕಿರುಕುಳ ನೀಡಿದ ನಂತರ ಕೇಂದ್ರ ಸಚಿವರೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ಮತ್ತು ಬಿಜೆಪಿ ನಾಯಕಿ ರಕ್ಷಾ ಖಡ್ಸೆ ಭಾನುವಾರ ಈ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಪ್ರತಿ ವರ್ಷ ಶಿವರಾತ್ರಿ ನಿಮಿತ್ತ ಕೊಠಾಳಿಯಲ್ಲಿ ಜಾತ್ರೆ ಹಮ್ಮಿಕೊಳ್ಳಲಾಗುತ್ತದೆ, ಹಿಂದಿನ ದಿನ ನನ್ನ ಮಗಳು ಈ ಜಾತ್ರೆಗೆ ಹೋಗಿದ್ದು, ಆಕೆಗೆ ಕೆಲ ಹುಡುಗರು ಕಿರುಕುಳ ನೀಡಿದ್ದು, ದೂರು ನೀಡಲು ಠಾಣೆಗೆ ಬಂದಿದ್ದೇನೆ ಎಂದು ಠಾಣೆಯ ಹೊರಗೆ ಅವರು ಸುದ್ದಿಗಾರರಿಗೆ ತಿಳಿಸಿದರು. “ನಾನು ಕೇಂದ್ರ ಸಚಿವ ಮತ್ತು ಸಂಸದನಾಗಿ ಬಂದಿಲ್ಲ, ನ್ಯಾಯ ಕೋರಿ ತಾಯಿಯಾಗಿ ಬಂದಿದ್ದೇನೆ” ಎಂದು ಖಾಡ್ಸೆ ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
‘ಜನಪ್ರತಿನಿಧಿಯ ಮಗಳಿಗೆ ಕಿರುಕುಳ ನೀಡಿದರೆ ಸಾಮಾನ್ಯ ನಾಗರಿಕರ ಸುರಕ್ಷತೆಯೇನು? ಎಂದು ಸಚಿವರು ಪ್ರಶ್ನಿಸಿದರು.
ಮಹಾರಾಷ್ಟ್ರದಾದ್ಯಂತ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಿವೆ ಮತ್ತು ಕಾನೂನಿನ ಭಯವಿಲ್ಲ ಎಂದು ಮೂರು ಬಾರಿ ಸಂಸದರಾಗಿರುವ ಸಚಿವೆ ಖಡ್ಸೆ ಹೇಳಿದರು. ಅನೇಕ ಹುಡುಗಿಯರು ಮುಂದೆ ಬರಲು ಹಿಂಜರಿಯುತ್ತಾರೆ, ಆದರೆ ನಾವು ಮೌನವಾಗಿರಬಾರದು, ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಇಂತಹ ಘಟನೆಗಳ ಬಗ್ಗೆ ಕ್ರಮಕ್ಕೆ ಒತ್ತಾಯಿಸುವುದಾಗಿ ಅವರು ಹೇಳಿದರು.
ಆರೋಪಿಗಳು ಹಲವಾರು ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಅವರನ್ನು ತಡೆಯಲು ಪ್ರಯತ್ನಿಸಿದಾಗ ಅವರ ಅಂಗರಕ್ಷಕರೊಂದಿಗೆ ಜಗಳಕ್ಕೆ ನಿಂತರು ಎಂದು ಮುಕ್ತೈನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಶಾನತ್ ಪಿಂಗ್ಡೆ ಹೇಳಿದ್ದಾರೆ. ಪ್ರಕರಣದಲ್ಲಿ ಏಳು ಆರೋಪಿಗಳನ್ನು ಹೆಸರಿಸಿದ್ದು, ಒಬ್ಬನನ್ನು ಬಂಧಿಸಲಾಗಿದೆ.
ಕಿರುಕುಳ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಬಾಲಕಿಯರ ವೀಡಿಯೋಗಳನ್ನು ಕ್ಲಿಕ್ಕಿಸಿದ್ದರಿಂದ ಐಟಿ ಕಾಯ್ದೆಯಡಿ ಆರೋಪವನ್ನೂ ಸೇರಿಸಲಾಗಿದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ