
ಗುವಾಹತಿ : ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮದ್ಯದ ಅಮಲಿನಲ್ಲಿ ಚಾಲಕ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲಕುಮಾರ ಮಹಂತ ಅವರ ಪುತ್ರಿ ಪ್ರಜೋಯೀತಾ ಕಶ್ಯಪ್ ಎದುರಿಗೆ ವ್ಯಕ್ತಿಯೊಬ್ಬರು ಮಂಡಿಯೂರಿ ಕುಳಿತಿದ್ದು, ಆತನನ್ನು ಮಹಿಳೆ ಬಯ್ಯುತ್ತಿದ್ದು ಚಪ್ಪಲಿಯಿಂದ ಹೊಡೆದಿರುವುದನ್ನು ವೀಡಿಯೊ ಕ್ಲಿಪ್ ತೋರಿಸಿದೆ.
ಗುವಾಹತಿಯ ಡಿಸ್ಪುರ ಪ್ರದೇಶದ ಹೈ-ಸೆಕ್ಯುರಿಟಿ ಎಂಎಲ್‌ಎ ಹಾಸ್ಟೆಲ್‌ನ ಕ್ಯಾಂಪಸ್‌ನಲ್ಲಿ ಈ ಘಟನೆಯ ವೀಡಿಯೊ ಚಿತ್ರೀಕರಿಸಲಾಗಿದೆ ಎನ್ನಲಾಗಿದ್ದು, ಇತರ ಸಿಬ್ಬಂದಿ ಘಟನೆಯನ್ನು ನೋಡುತ್ತಿರುವುದು ಕಂಡುಬಂದಿದೆ.

ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿವೀಡಿಯೊ ವೈರಲ್ ಆಗುತ್ತಿದ್ದಂತೆ, ಪ್ರಜೋಯೀತಾ ಕಶ್ಯಪ್ ಆತ ತಮ್ಮ ಕುಟುಂಬದ ಜೊತೆ ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದ ಚಾಲಕ ಎಂದು ಹೇಳಿದ್ದಾರೆ. ಆದರೆ ಆತ ಯಾವಾಗಲೂ ಕುಡಿದು ನಮ್ಮ ಮೇಲೆ ಕಾಮೆಂಟ್ಗಳನ್ನು ಮಾಡುತ್ತಾನೆ. ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ. ನಾವು ಅವನಿಗೆ ಅರ್ಥಮಾಡಿಸಲು ಪ್ರಯತ್ನಿಸಿದೆವು ಮತ್ತು ಹಾಗೆ ಮಾಡಬೇಡಿ ಎಂದು ಹೇಳಿದೆವು. ಆದರೆ ಆತ ಇಂದು ಸಹ ಕುಡಿದು ಬಂದು ನಮ್ಮ ಮನೆಯ ಬಾಗಿಲು ಬಡಿದು ಗದ್ದಲ ಪ್ರಾರಂಭಿಸಿದಾಗ ಅದು ಎಲ್ಲಾ ಮಿತಿಗಳನ್ನು ಮೀರಿದೆ ಎಂದು ಅವರು ಹೇಳಿದರು.
ಪೊಲೀಸರಿಗೆ ಏಕೆ ದೂರು ನೀಡಿಲ್ಲ ಎಂಬ ಪ್ರಶ್ನೆಗೆ ಅವರು ನೇರ ಪ್ರತಿಕ್ರಿಯೆ ನೀಡದೆ ತಪ್ಪಿಸಿಕೊಂಡರು ಹಾಗೂ ಅಂತಹ ಸಮಸ್ಯೆಗಳು ಉದ್ಭವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯ ಪಾತ್ರವನ್ನು ಪ್ರಶ್ನಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಚಾಲಕ ಸರ್ಕಾರಿ ನೌಕರನೇ ಅಥವಾ ಕುಟುಂಬದವರು ವೈಯಕ್ತಿಕವಾಗಿ ನೇಮಿಸಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಅಸೋಮ್ ಗಣ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರಫುಲ್ಲಕುಮಾರ ಮಹಾಂತ ಅವರು ಶಾಸಕರಲ್ಲದಿದ್ದರೂ ಅವರ ಕುಟುಂಬಕ್ಕೆ ಶಾಸಕರ ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ನೀಡಲಾಗಿದೆ.
ಮಹಾಂತ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. : ಮೊದಲು 1985 ರಿಂದ 1990 ರವರೆಗೆ ಮತ್ತು ಮತ್ತೊಮ್ಮೆ 1996 ರಿಂದ 2001 ರವರೆಗೆ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ