ಧಾರವಾಡ : ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟಗಾರ, ಬಹು ಭಾಷಾ ಪಂಡಿತ, ಹಿರಿಯ ಸಾಹಿತಿ, ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ (92) ) ಶುಕ್ರವಾರ (ಮಾರ್ಚ್ 14) ನಗರದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1933 ಜನವರಿ 6ರಂದು ಜನಿಸಿದರು. ಬಿಸರಹಳ್ಳಿಯಲ್ಲಿ ಆರಂಭಿಕ ಶಿಕ್ಷಣ, ನಂತರ ಕೊಪ್ಪಳಕ್ಕೆ ಬಂದರು. ಭಾರತ ಸ್ವತಂತ್ರವಾದರೂ ಸಹ ನಿಜಾಮಶಾಹಿ ಆಳ್ವಿಕೆಯಲ್ಲಿದ್ದ ಕೊಪ್ಪಳದಲ್ಲಿ ದಬ್ಬಾಳಿಕೆ ನಡೆದಿತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳುತ್ವದಲ್ಲಿ ಹೈದರಾಬಾದ್-ಕರ್ನಾಟಕ ವಿಮೋಚನಾ ಚಳವಳಿ ಆರಂಭವಾಗಿತ್ತು. ಆಗ ಅವರು ಹೈದರಾಬಾದ್ ನಿಜಾಮನ ರಜಾಕಾರರ ವಿರುದ್ಧ ಹೋರಾಡಿದ್ದರು. ನಂತರ ಹೈದರಾಬಾದ್-ಕರ್ನಾಟಕ ವಿಮೋಚನೆಯಾದ ನಂತರ ಬಿಸರಹಳ್ಳಿಗೆ ಮರಳಿದ್ದರು. ಧಾರವಾಡಕ್ಕೆ ಬಂದು ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಅಮೆರಿಕೆಯ ಅರಿಝೋನಾ ಜಾಗತಿಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ ಪಡೆದರು.
ಪತ್ರಕರ್ತರಾಗಿ, ಪ್ರಕಾಶಕರಾಗಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಅವರು ಕೆಲಸ ಮಾಡಿದ್ದಾರೆ. ಹಿಂದಿ, ಗುಜರಾತಿ ಉರ್ದು, ಭಾಷೆಯಲ್ಲೂ ಸಾಹಿತ್ಯ ರಚಿಸಿದ್ದಾರೆ. ಹಲವು ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಪಂಚಾಕ್ಷರಿ ಹಿರೇಮಠ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ರಷ್ಯಾ, ಜಾರ್ಜಿಯಾ ಹಾಗೂ ಉಝೇಕಿಸ್ತಾನದ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಅವರು ಕವಿ, ಕಥೆಗಾರ, ಪ್ರಬಂಧಕಾರ, ವಿಮರ್ಷಕ, ಅನುವಾದಕ, ವಾಗ್ಮಿ ಹಾಗೂ ಸಂಪಾದಕ. ಅವರ ಅನೇಕ ಕೃತಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ಅನುವಾದಗೊಂಡಿದೆ.
19 ಕಾವ್ಯ ಸಂಕಲನಗಳು, 11 ಕಥಾ ಸಂಕಲನಗಳು, ಉರ್ದು ಮತ್ತು ಹಿಂದಿಯಿಂದ ಕನ್ನಡಕ್ಕೆ ತಂದ 8 ಅನುವಾದಿತ ಕಾದಂಬರಿಗಳು, 13 ಪ್ರಬಂಧ ಮತ್ತು ವಿಮರ್ಶೆಯ ಕೃತಿಗಳು, 7 ಚಿಂತನ ಸಾಹಿತ್ಯ ಕೃತಿಗಳು, 6 ಜೀವನ ಚರಿತ್ರೆಗಳು, 3 ಪತ್ರ ಸಾಹಿತ್ಯ ಕೃತಿಗಳು, 2 ಚರಿತ್ರೆಗಳು, 7 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದಿತ ನಾಟಕಗಳು, ಸಂಪಾದನೆಯ 8 ಕೃತಿಗಳು, ಹಿಂದಿ, ತೆಲಗು ಹಾಗೂ ಆಂಗ್ಲಭಾಷೆಗೆ ಭಾಷಾಂತರಗೊಂಡ 8 ಕೃತಿಗಳು ಸೇರಿ ಸುಮಾರು ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತಲೋಕಕ್ಕೆ ನೀಡಿದ್ದಾರೆ.
ಪಂಚಾಕ್ಷರಿ ಹಿರೇಮಠ ಅವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ(ಅನುವಾದ), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಮಲಾ ಗೊಯೆಂಕಾ ಫೌಂಡೇಶನ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.


ನಿಮ್ಮ ಕಾಮೆಂಟ್ ಬರೆಯಿರಿ