9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಅಮೆರಿಕದ ಬುಚ್ ವಿಲ್ಮೋರ್ (Butch Wilmore) ಅವರನ್ನು ಅತ್ಯಂತ ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ.
ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಯಿಂದ 400 ಕಿ.ಮೀ ದೂರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಯತ್ತ ಪಯಣ ಆರಂಭಿಸಿತ್ತು. ನಿರಂತರ 17 ಗಂಟೆಗಳ ಪ್ರಯಾಣದ ನಂತರ ಭಾರತೀಯ ಕಾಲಮಾನ, ಸರಿಯಾಗಿ ಇಂದು ನಸುಕಿನ 3:27ರ ಸಮಯಕ್ಕೆ ಅಮೆರಿಕದ ಫ್ಲೋರಿಡಾ ಸಮುದ್ರದಲ್ಲಿ ಇಳಿಯಿತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಳೆದ 9 ತಿಂಗಳಿಂದ ಬೋಯಿಂಗ್ ಸ್ಟಾರ್‌ಲೈನರ್ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಸಿಲುಕಿಕೊಂಡಿದ್ದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಯಶಸ್ವಿಯಾಗಿ ಭೂಮಿಗೆ ಬಂದಿಳಿದಿದ್ದಾರೆ.
ಭೂಮಿಯ ಗುರುತ್ವಾಕರ್ಷಣೆಗೆ ಪ್ರವೇಶಿಸುತ್ತಿದ್ದಂತೆಯೇ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ‘ದಿ ಕ್ರ್ಯೂ-9 ತನ್ನ ವೇಗ ಕಡಿಮೆಮಾಡಿಕೊಳ್ಳುತ್ತ ಬಂದಿತು. ನೌಕೆ ಸಮುದ್ರದಲ್ಲಿ ಇಳಿಯುವಾಗ ಅದರಲ್ಲಿದ್ದ ಪ್ಯಾರಾಚೂಟ್‌ಗಳು ತೆರೆದುಕೊಂಡವು. ಮೊದಲಿಗೆ ಸ್ಪೇಸ್ ಎಕ್ಸ್‌ಡ್ರ್ಯಾಗನ್ ನೌಕೆಯನ್ನು ಸ್ಥಿರಗೊಳಿಸಲು ಎರಡು ಡ್ರೋಗ್ ಪ್ಯಾರಾಚೂಟ್‌ಗಳನ್ನು ತೆರೆದುಕೊಂಡಿತು. ಆ ನಂತರ ಲ್ಯಾಡಿಂಗ್ ಆಗುವಾಗ ಬಾಹ್ಯಾಕಾಶ ನೌಕೆಯ ವೇಗವನ್ನು ಇನ್ನೂ ಕಡಿಮೆ ಮಾಡಲು ನಾಲ್ಕು ಪ್ಯಾರಾಚೂಟ್‌ಗಳನ್ನು ತೆರೆದುಕೊಂಡಿತು. ಇದಾದ ಕೆಲವೇ ಕ್ಷಣಗಳಲ್ಲಿ ನೌಕೆ ಸುರಕ್ಷಿತವಾಗಿ ಸಮುದ್ರದಲ್ಲಿ ಇಳಿಯಿತು. ಸ್ಪೇಸ್ ಎಕ್ಸ್ ಕ್ರ್ಯೂಸ್‌ನ ಕ್ಯಾಪ್ಸುಲ್ ನೀರಿನಲ್ಲಿ ತೇಲಿತು.
ನೌಕೆಯ ಸಮುದ್ರದಲ್ಲಿ ತೇಲುತ್ತಿದ್ದಂತೆಯೇ ಮೂರು ಬೋಟ್‌ಗಳಲ್ಲಿ ಅಮೆರಿಕ ನೌಕಾಪಡೆ ಸ್ಥಳಕ್ಕೆ ಧಾವಿಸಿತು. ಅಲ್ಲದೆ, ಅಲ್ಲಿಯೇ ಸಿದ್ಧವಾಗಿ ನಿಂತಿದ್ದ ಸ್ಪೇಸ್ ಎಕ್ಸ್ನ ರಿಕವರಿ ಬೋಟ್ ಸಹ ಧಾವಿಸಿತು.
ನೌಕಾಪಡೆ ಸಿಬ್ಬಂದಿ ಮೊದಲಿಗೆ ಗಗನಯಾತ್ರಿಗಳಿದ್ದ ಬಾಹಾಕಾಶ ನೌಕೆಯನ್ನು ನಿಯಂತ್ರಿಸಲು ಹಗ್ಗ ಕಟ್ಟಿ ಹಡಗಿನ ಬಳಿಗೆ ಎಳೆದೊಯ್ದರು. ಬಳಿಕ ಅತ್ಯಂತ ನಾಜೂಕಾಗಿ ಕ್ಯಾಪ್ಸುಲ್ ಅನ್ನು ಹಡಗಿಗೆ ಸ್ಥಳಾಂತರ ಮಾಡಿದರು. ನಂತರ ನಟ್ಟು, ಬೋಲ್ಟ್‌ಗಳಿಂದ ಟೈಟಾಗಿದ್ದ ಕ್ಯಾಪ್ಸುಲ್‌ನ ಡೋರ್ ಅನ್ನು ತೆಗೆಯಲಾಯಿತು. ಮೊದಲಿಗೆ ನಾಸಾ ಗಗನಯಾತ್ರಿ ಹೇಗ್‌ರನ್ನು ಹೊರಗೆ ತರಲಾಯಿತು. ನಂತರ ರಷ್ಯಾದ ಗಗನನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಹೊರಗೆ ತರಲಾಯಿತು.
ಮೂರನೆಯದಾಗಿ ಸುನೀತಾ ವಿಲಿಯಮ್ಸ್ ಅವರನ್ನು ಹೊರಗೆ ಕರೆತರಲಾಯಿತು. ಎದ್ದು ನಿಲ್ಲಲೂ ಆಗದ ಸುನಿತಾ ಕುಳಿತಲ್ಲೇ ನಗುಮೊಗದೊಂದಿಗೆ ಕೈಬೀಸಿ ಸಂಭ್ರಮ ವ್ಯಕ್ತಪಡಿಸಿದರು. ನಂತರ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಹೊರಗೆ ಕರೆತರಲಾಯಿತು. ಈ ಎಲ್ಲಾ ಪ್ರಕ್ರಿಯೆಗಳು ನಸುಕಿನ 4:27ರ ಸುಮಾರಿಗೆ ಮುಕ್ತಾಯಗೊಂಡಿತು.
ನಂತರ ನಾಲ್ವರು ಗಗನಯಾತ್ರಿಗಳನ್ನು ಅವರು ಧರಿಸಿದ್ದ ವಿಶೇಷ ಬಾಹ್ಯಾಕಾಶ ಸೂಟ್‌ನಲ್ಲೇ ಹೆಲಿಕಾಪ್ಟರ್ ಮೂಲಕ ನಾಸಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಷ್ಟು ದಿನ ಬಾಹ್ಯಾಕಾಶದಲ್ಲಿದ್ದ ಕಾರಣ ಅವರು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕಿದೆ. ಅವರ ಆರೋಗ್ಯ ಸ್ಥಿತಿ ಸ್ಪಂದಿಸಬೇಕಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಿ ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.
ಸುನೀತಾ ಮತ್ತು ಬುಚ್ಬ ಮುಂದಿರುವ ಆರೋಗ್ಯದ ಸವಾಲುಗಳು
ಬಾಹ್ಯಾಕಾಶ ಪ್ರಯಾಣಿಕರು ದೀರ್ಘಾವಧಿಯ ತಂಗುವಿಕೆಯ ನಂತರ ಭೂಮಿಗೆ ಹಿಂದಿರುಗಿದ ನಂತರ ಮೂಳೆ ಮತ್ತು ಸ್ನಾಯುವಿನ ಕ್ಷೀಣತೆ, ವಿಕಿರಣಕ್ಕೆ ಒಡ್ಡಿಕೊಳ್ಳುವುದು ಮತ್ತು ದೃಷ್ಟಿ ದುರ್ಬಲತೆಗಳು ಇತ್ಯಾದಿ ಎದುರಿಸಬೇಕಾದ ಕೆಲವು ಸವಾಲುಗಳಾಗಿವೆ.
ಗುರುತ್ವಾಕರ್ಷಣೆಯ ಕೊರತೆಯು ಗಮನಾರ್ಹವಾದ ಮತ್ತು ಆಗಾಗ್ಗೆ ಸರಿಪಡಿಸಲಾಗದ, ಮೂಳೆ ಸಾಂದ್ರತೆಯ ನಷ್ಟವನ್ನು ಉಂಟುಮಾಡುತ್ತದೆ.
ಸಾಮಾನ್ಯವಾಗಿ ಸ್ನಾಯುಗಳು ಸಹ ದುರ್ಬಲಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿ ಸಮಯ ಕಳೆಯುವ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ವಿಕಿರಣಕ್ಕೆ ಒಡ್ಡಿಕೊಳ್ಳುವುದು. ಭೂಮಿಯ ವಾತಾವರಣ ಮತ್ತು ಕಾಂತೀಯ ಕ್ಷೇತ್ರವು ಮಾನವರನ್ನು ಉನ್ನತ ಮಟ್ಟದ ವಿಕಿರಣದಿಂದ ರಕ್ಷಿಸುತ್ತದೆ, ಆದರೆ ಅಂತಹ ರಕ್ಷಣೆ ಗಗನಯಾತ್ರಿಗಳಿಗೆ ಅಲ್ಲಿ ಲಭ್ಯವಿರುವುದಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ