ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಹೆದರದೆ 13 ವರ್ಷದ ಬಾಲಕ ಮನೆಯಲ್ಲಿಯೇ ತಾಯಿಗೆ ಹೆರಿಗೆ ಮಾಡಿಸಿದ್ದಾನೆ…! ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, 13 ವರ್ಷದ ಬಾಲಕ ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಯಿಂದ ಸರಿಯಾದ ಸೂಚನೆಗಳನ್ನು ಪಡೆದು ತಾಯಿಗೆ ಹೆರಿಗೆ ಮಾಡಲು ಸಹಾಯ ಮಾಡಿದ್ದಾನೆ. ಅಲ್ಲದೆ, ಆಸ್ಪತ್ರೆ ಆಂಬುಲೆನ್ಸ್ ಬರುವವರೆಗೂ ತಾಯಿ ಮತ್ತು ಶಿಶುವನ್ನು ಸುರಕ್ಷಿತವಾಗಿ ಇರಿಸಿದ್ದಾನೆ.
ಬಾಲಕ ಆತಂಕದಲ್ಲಿ ತುರ್ತು ಕೇಂದ್ರಕ್ಕೆ ಕರೆ ಮಾಡಿದಾಗ, 37 ವಾರಗಳ ಗರ್ಭಿಣಿಯಾಗಿದ್ದ ಆತನ ತಾಯಿ ಅಸಹನೀಯ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ತನ್ನ ತಾಯಿಯ ಆರೋಗ್ಯದ ಬಗ್ಗೆ ಅರೆವೈದ್ಯರಾದ ಚೆನ್ ಚೋಶುನ್ ಅವರಿಗೆ ಆತಂಕದಿಂದ ಬಾಲಕ ಫೋನ್ನಲ್ಲಿ ತಿಳಿಸಿದ್ದಾನೆ. ಹಾಗೂ ತಾನು ಮಗುವಿನ ತಲೆ ಹೊರಬಂದಿದ್ದನ್ನು ನೋಡುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ.
ತಕ್ಷಣವೇ ತುರ್ತು ಕ್ರಮವಾಗಬೇಕಿರುವುದರಿಂದ ಅರೆವೈದ್ಯ ಚೆನ್ ಚೋಶುನ್ ನಂತರ ಬಾಲಕನಿಗೆ ತಾಯಿಯನ್ನು ಹೇಗೆ ಇರಿಸಬೇಕು, ಹೆರಿಗೆಗೆ ಹೇಗೆ ಸಹಾಯ ಮಾಡಬೇಕು ಮತ್ತು ಆಂಬ್ಯುಲೆನ್ಸ್ ಅವರ ಮನೆಗೆ ತಲುಪವರೆಗೆ ಆಕೆಯನ್ನು ಶಾಂತವಾಗಿರಿಸುವುದು ಹೇಗೆ ಎಂಬ ಸೂಚನೆಗಳನ್ನು ನೀಡಿದ್ದಾರೆ. ಅರೆವೈದ್ಯರ ಸೂಚನೆಯಂತೆ ತಾಯಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡುವಲ್ಲಿ ಬಾಲಕ ಸಹಾಯ ಮಾಡಿದ್ದಾನೆ.
ಹೊಕ್ಕುಳಬಳ್ಳಿಯನ್ನು ಕ್ಲ್ಯಾಂಪ್ ಮಾಡುವ ಸಮಯ ಬಂದಾಗ, ಹುಡುಗನಿಗೆ ಸ್ವಚ್ಛವಾದ ಶೂಲೇಸ್ ಅಥವಾ ದಾರ ಸಿಗದೇ ಇದ್ದಾಗ ರಕ್ತಸ್ರಾವ ಮತ್ತು ಸೋಂಕನ್ನು ನಿಲ್ಲಿಸಲು ಮಾಸ್ಕ್ ಪಟ್ಟಿ ಬಳಸಲು ಅರೆವೈದ್ಯ ಚೆನ್ ಚೋಶುನ್ ಸಲಹೆ ನೀಡಿದ್ದಾರೆ. ಬಾಲಕ ಅದನ್ನು ಮಾಡಿದ್ದಾನೆ. ಸ್ವಲ್ಪ ಸಮಯದ ನಂತರ ಆಂಬುಲೆನ್ಸ್ ಸಮೇತ ವೈದ್ಯಕೀಯ ಸಿಬ್ಬಂದಿ ಆಗಮಿಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು, ಇಬ್ಬರೂ ಆರೋಗ್ಯವಾಗಿದ್ದಾರೆ.
ಹಲವಾರು ಜನರು ಬಾಲಕನ ಸಾಹಸವನ್ನು ಶ್ಲಾಘಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ