ಡಬಲ್ ನ್ಯುಮೋನಿಯಾದಿಂದ ಚೇತರಿಸಿಕೊಳ್ಳುತ್ತಿದ್ದ 88 ವರ್ಷದ ಪೋಪ್ ಫ್ರಾನ್ಸಿಸ್, ಸೋಮವಾರ ಕಾಸಾ ಸಾಂತಾ ಮಾರ್ತಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ವ್ಯಾಟಿಕನ್ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದೆ.
ಬೆನೆಡಿಕ್ಟ್ XVI ರಾಜೀನಾಮೆ ನೀಡಿದ ನಂತರ 2013 ರಲ್ಲಿ ಅವರು ಪೋಪ್ ಆಗಿದ್ದರು. ಈಸ್ಟರ್ ಭಾನುವಾರದಂದು ವ್ಯಾಟಿಕನ್‌ನಲ್ಲಿ ಭಕ್ತರ ಸಮೂಹವನ್ನು ಸಂತ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಕಾಣಿಸಿಕೊಂಡು ಆಶೀರ್ವದಿಸಿದ ಒಂದು ದಿನದ ನಂತರ ಅವರು ಈಸ್ಟರ್ ಸೋಮವಾರದಂದು ನಿಧನರಾದರು.
ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಪವಿತ್ರ ಫಾದರ್ ಫ್ರಾನ್ಸಿಸ್ ಅವರ ನಿಧನವನ್ನು ನಾನು ತೀವ್ರ ದುಃಖದಿಂದ ಘೋಷಿಸಬೇಕಾಗಿದೆ” ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ಅವರು ವ್ಯಾಟಿಕನ್‌ನ ಟಿವಿ ಚಾನೆಲ್‌ನಲ್ಲಿ ಪ್ರಕಟಿಸಿದರು. “ಇಂದು ಬೆಳಿಗ್ಗೆ 7:35 ಕ್ಕೆ (5:35 GMT) ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ನಿಧನರಾದರು… ಅವರ ಇಡೀ ಜೀವನವು ಭಗವಂತ ಮತ್ತು ಅವರ ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು ಎಂದು ಅವರು ತಿಳಿಸಿದರು.
ಪೋಪ್ ಫ್ರಾನ್ಸಿಸ್, ತಮ್ಮ ಆರೋಗ್ಯ ಕ್ಷೀಣಿಸುತ್ತಿದ್ದರೂ, ಭಾನುವಾರ ಗಾಲಿಕುರ್ಚಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಕೊನೆಯ ಸಂದೇಶದಲ್ಲಿ, ಜಗತ್ತು ದೊಡ್ಡ ಪ್ರಮಾಣದ ಸಂಘರ್ಷಗಳಿಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ಸ್ವಾತಂತ್ರ್ಯ ಮತ್ತು ಶಾಂತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೇರಿಕನ್ ನಾಯಕ ಸತತ ಮೂರನೇ ವರ್ಷ ವಾರ್ಷಿಕ ಗುಡ್ ಫ್ರೈಡೇ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಭಾನುವಾರ ಬೆಳಿಗ್ಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಪೋಪ್ ಸ್ವಲ್ಪವೇ ಹೊತ್ತು ಕಾಣಿಸಿಕೊಂಡರು.
ಫೆಬ್ರವರಿ 14 ರಂದು ಬ್ರಾಂಕೈಟಿಸ್ ಚಿಕಿತ್ಸೆಗಾಗಿ ಪೋಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರದ ದಿನಗಳಲ್ಲಿ, ಪೋಪ್‌ಗೆ ಡಬಲ್ ನ್ಯುಮೋನಿಯಾ ಇರುವುದು ಪತ್ತೆಯಾಯಿತು ಮತ್ತು ಅವರು “ಗಂಭೀರ ಸ್ಥಿತಿಯಲ್ಲಿದ್ದಾರೆ” ಮತ್ತು ಮೂತ್ರಪಿಂಡ ವೈಫಲ್ಯದ “ಆರಂಭಿಕ, ಸೌಮ್ಯ” ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ವ್ಯಾಟಿಕನ್ ಹೇಳಿತ್ತು.
ಆದರೆ ಐದು ವಾರಗಳ ಅವಧಿಯಲ್ಲಿ ಅವರ ಸ್ಥಿತಿ ಸುಧಾರಿಸಿತು, ಮತ್ತು ಮಾರ್ಚ್ 23 ರಂದು, ಅವರು ಆಸ್ಪತ್ರೆಯ ಬಾಲ್ಕನಿಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡರು ಮತ್ತು ಹೊರಗೆ ನೆರೆದಿದ್ದ ಜನಸಮೂಹಕ್ಕೆ ಥಂಬ್ಸ್-ಅಪ್ ನೀಡಿದ್ದರು.
ವೈದ್ಯರು ಪೋಪ್ ಫ್ರಾನ್ಸಿಸ್‌ಗೆ ವಿಶ್ರಾಂತಿ ಸೂಚಿಸಿದ್ದರೂ ಸಹ, ಪೋಪ್ ಈಸ್ಟರ್ ಭಾನುವಾರದಂದು ಅಚ್ಚರಿಯೆಂಬಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಡಬಲ್ ನ್ಯುಮೋನಿಯಾ ಸೋಂಕಿಗೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಅವರು ಪ್ರಥಮವಾಗಿ ಸಾರ್ವನಿಕವಾಗಿ ಕಾಣಿಸಿಕೊಂಡಿದ್ದಾಗಿತ್ತು. ಸೇಂಟ್ ಪೀಟರ್ಸ್ ಚೌಕದಲ್ಲಿ 35,000 ಜನರ ಗುಂಪು ಅವರನ್ನು ಸ್ವಾಗತಿಸಿತು, ಅಲ್ಲಿ ಅವರು ಯಾತ್ರಿಕರನ್ನು ಆಶೀರ್ವದಿಸಿದರು ಮತ್ತು ಅವರತ್ತ ಕೈ ಬೀಸಿದರು.
ಫ್ರಾನ್ಸಿಸ್ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಅದು ಅವರಿಗೆ ಗಾಲಿಕುರ್ಚಿಯನ್ನು ಬಳಸಬೇಕಾಗಿತ್ತು. ಪೋಪ್ ಅವರನ್ನು ಮಾರ್ಚ್ 2023 ರಲ್ಲಿ ಉಸಿರಾಟದ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವರ್ಷ, ಅವರು ಹರ್ನಿಯಾಗೆ ಶಸ್ತ್ರಚಿಕಿತ್ಸೆಗೆ ಒಳಗಾದರು, ಮತ್ತು 2021 ರಲ್ಲಿ, ಅವರಿಗೆ ಕೊಲೊನ್ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಅರ್ಜೆಂಟೀನಾದಲ್ಲಿ ಜನಿಸಿದ ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ, ಫ್ರಾನ್ಸಿಸ್ ಅವರು ವಿಶ್ವದ ಸುಮಾರು 140 ಕೋಟಿ ಕ್ಯಾಥೊಲಿಕರನ್ನು ಮುನ್ನಡೆಸಿದ ಮೊದಲ ಜೆಸ್ಯೂಟ್ ಮತ್ತು ದಕ್ಷಿಣ ಅಮೆರಿಕದಿಂದ ಬಂದ ಮೊದಲಿಗರು. ಅವರು ಮಾರ್ಚ್ 13, 2013 ರಂದು 76 ನೇ ವಯಸ್ಸಿನಲ್ಲಿ ಪೋಪ್ ಆಗಿ ಆಯ್ಕೆಯಾದರು. 12 ವರ್ಷಗಳಲ್ಲಿ, ಅವರು ವ್ಯಾಟಿಕನ್‌ನ ಅಧಿಕಾರಶಾಹಿಯನ್ನು ಮರುಸಂಘಟಿಸಿದರು, ನಾಲ್ಕು ಪ್ರಮುಖ ಬೋಧನಾ ದಾಖಲೆಗಳನ್ನು ಬರೆದರು, 65 ಕ್ಕೂ ಹೆಚ್ಚು ದೇಶಗಳಿಗೆ 47 ವಿದೇಶಿ ಪ್ರವಾಸಗಳನ್ನು ಮಾಡಿದರು.
ಪ್ರಧಾನಿ ಮೋದಿ ಅವರು ಪೋಪ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಾನು ಅವರೊಂದಿಗಿನ ನನ್ನ ಭೇಟಿಗಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಮತ್ತು ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯಿಂದ ನನಗೆ ಹೆಚ್ಚಿನ ಸ್ಫೂರ್ತಿ ಸಿಕ್ಕಿದೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಯಾವಾಗಲೂ ಪಾಲಿಸಲ್ಪಡುತ್ತದೆ. ಅವರ ಆತ್ಮವು ದೇವರ ಅಪ್ಪುಗೆಯಲ್ಲಿ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಲಿ” ಎಂದು ಅವರು ಬರೆದಿದ್ದಾರೆ.
“ಸಮಾಜದ ದುರ್ಬಲ ಸದಸ್ಯರಿಗೆ, ನ್ಯಾಯ ಮತ್ತು ಸಮನ್ವಯಕ್ಕೆ ಅವರ ಅವಿಶ್ರಾಂತ ಬದ್ಧತೆಗಾಗಿ ಫ್ರಾನ್ಸಿಸ್ ಅವರನ್ನು ಸ್ಮರಿಸಲಾಗುತ್ತದೆ” ಎಂದು ಜರ್ಮನ್ ಚಾನ್ಸೆಲರ್-ಇನ್-ವೇಟಿಂಗ್ ಫ್ರೆಡ್ರಿಕ್ ಮೆರ್ಜ್ ಹೇಳಿದರು. ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಪೋಪ್ ಫ್ರಾನ್ಸಿಸ್ ಅವರನ್ನು “ತೀವ್ರವಾದ ನಂಬಿಕೆ, ಶಾಂತಿ ಮತ್ತು ಸಹಾನುಭೂತಿಯ ವ್ಯಕ್ತಿ” ಎಂದು ಸ್ಮರಿಸಿದರು.
ಫ್ರಾನ್ಸಿಸ್ ಅವರನ್ನು ‘ಜನರ ಪೋಪ್’ ಎಂದು ಕರೆದ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ರಾಬರ್ಟಾ ಮೆಟ್ಸೋಲಾ ಅವರು “ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಯುರೋಪ್ ಶೋಕ ವ್ಯಕ್ತಪಡಿಸುತ್ತದೆ. ಅವರ ನಗು ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯಗಳನ್ನು ಸೆರೆಹಿಡಿತು. ‘ಜನರ ಪೋಪ್’ ಅವರ ಜೀವನದ ಮೇಲಿನ ಪ್ರೀತಿ, ಶಾಂತಿಯ ಭರವಸೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೇಲಿನ ಸಹಾನುಭೂತಿಗಾಗಿ ಸ್ಮರಿಸಲಾಗುತ್ತದೆ. ಅವರು ಶಾಂತಿಯಿಂದ ವಿಶ್ರಾಂತಿ ಪಡೆಯಲಿ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ