ವೀಡಿಯೊಗಳು..| ಆಪರೇಶನ್‌ ಸಿಂಧೂರ್‌ : ಪಾಕಿಸ್ತಾನ, ಪಿಒಕೆಯ 9 ಭಯೋತ್ಪಾಕರ ನೆಲೆ ಮೇಲೆ ಭಾರತ ಸೇನೆಯಿಂದ ಕ್ಷಿಪಣಿ ದಾಳಿ, 80ಕ್ಕೂ ಹೆಚ್ಚು ಉಗ್ರರು ಸಾವು..?

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಇದಕ್ಕೆ ʼಆಪರೇಷನ್ ಸಿಂಧೂರ್ʼ (‌Operation Sindoor) ಎಂದು ಹೆಸರಿಡಲಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಬುಧವಾರ ಬೆಳಗಿನ ಜಾವ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.
ಪಹಲ್ಗಾಮ್‌ನಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳ ನಂತರ ಈ ದಾಳಿಗಳು ನಡೆದಿವೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ನಡೆಸಿದ ಸರಣಿ ನಿಖರ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.

ಮಧ್ಯರಾತ್ರಿ 1:44ರ ಸುಮಾರಿಗೆ ಭಾರತ ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳ ಕ್ರಮಗಳು ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಬದಲಾಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ದಾಳಿಗೆ ಆಯ್ದುಕೊಂಡ 9 ಸ್ಥಳಗಳಲ್ಲಿ 4 ಪಾಕಿಸ್ತಾನದಲ್ಲಿದ್ದರೆ ಇನ್ನುಳಿದ ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ.
2019ರಲ್ಲಿ ಪುಲ್ವಾಮಾ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞೆ ಮಾಡಿದ್ದರು. ಏಪ್ರಿಲ್ 22 ರಂದು 26 ನಾಗರಿಕರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದವು.

. ‘ಆಪರೇಷನ್ ಸಿಂಧೂರ್’ ಎಂಬ ಸಂಕೇತನಾಮದಡಿಯಲ್ಲಿ ರಾತ್ರಿಯಿಡೀ ನಡೆದ ನಿಖರ ದಾಳಿಯಲ್ಲಿ ಒಟ್ಟು ಒಂಬತ್ತು ಸ್ಥಳಗಳ ಮೇಲೆ ವಾಯುದಾಳಿ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್ –ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳ ನೆಲೆಯಿರುವ ಬಹವಾಲ್‌ಪುರದಲ್ಲಿ ಮರ್ಕಜ್ ಸುಭಾನ್ ಅಲ್ಲಾ ಮಸೀದಿ, ತೆಹ್ರಾ ಕಲಾನ್‌ನಲ್ಲಿನ ಸರ್ಜಾಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಕ್ಯಾಂಪ್‌ಗಳ ಮೇಲೆ ಭಾರತ ದಾಳಿ ನಡೆಸಿದೆ.
ಲಷ್ಕರ್‌–ಎ–ತಯಬಾ ಉಗ್ರ ಸಂಘಟನೆಯ ಶಿಬಿರಗಳಿರುವ ಮುರ್ಡಿಕೆಯ ಮರ್ಕಝ್ ತೈಬಾ, ಬರ್ನಾಲಾದಲ್ಲಿ ಮರ್ಕಝ್ ಅಹ್ಲೆ ಹದಿತ್ ಮತ್ತು ಮುಜಫರಾಬಾದ್‌ನ ಶ್ವವಾಯಿ ನಲ್ಲಾ ಮೇಲೆ ದಾಳಿ ನಡೆದಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement