ವಿಜಯಪುರ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನದ ಪರ ಪೋಸ್ಟ್ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕ್ ಪ್ರೇಮ ಮೆರೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ಧ್ ಫಾರೂಖಿ ಶೇಖ್ ಎಂಬಾಕೆ ಪಾಕ್ ಪರ ಪೋಸ್ಟ್ ಹಾಕಿದ್ದಾಳೆ.
” ನನ್ನ ಪಾಕಿಸ್ತಾನಿ ಸ್ನೇಹಿತರೇ, ಐಒಜೆಕೆ, ಎಜೆಕೆ ಜನರೇ, ಗಡಿಯ 200 ಕಿ.ಮೀ ವ್ಯಾಪ್ತಿಯಲ್ಲಿ ನೀವು ಓಡಾಡಬೇಡಿ, ಒಳನಾಡಿಗೆ ಹೋಗಿ. ಅಲ್ಲಾಹ್ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸುತ್ತಾನೆ” ಎಂದು ಪಾಕ್ ಧ್ವಜದೊಂದಿಗೆ ಪೋಸ್ಟ್ ಹಾಕಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ನಂತರ ವಿದ್ಯಾರ್ಥಿನಿ ತನ್ನ ಪೋಸ್ಟ್‌ಗೆ ಕ್ಷಮೆಯಾಚಿಸಿ ಮತ್ತೊಂದು ಪೋಸ್ಟ್ ಮಾಡಿದ್ದಾಳೆ.
ನನ್ನ ಪೋಸ್ಟ್ ಬಹಳಷ್ಟು ಜನರಿಗೆ ನೋವು ತಂದಿದೆ. ನಾನು ಎಲ್ಲರಿಗೂ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ಭಾರತದಲ್ಲಿ ಜನಿಸಿ ಬೆಳೆದ ನನಗೆ ಇದು ನನ್ನ ತಾಯ್ನಾಡು. ನನ್ನ ಮೂರ್ಖತನದ ಪೋಸ್ಟ್‌ಗೆ ನಾನು ಮತ್ತೊಮ್ಮೆ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇನ್ಮುಂದೆ ಎಂದಿಗೂ ಇಂತಹ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ, ಜೈ ಹಿಂದ್’ ಎಂದು ಭಾರತದ ಧ್ವಜ ಚಿತ್ರದೊಂದಿಗೆ ವಿದ್ಯಾರ್ಥಿನಿ ಪೋಸ್ಟ್ ಮಾಡಿದ್ದಾಳೆ.
ನಿಮ್ಮ ಕಾಮೆಂಟ್ ಬರೆಯಿರಿ