ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಇತ್ತೀಚಿನ ಹೇಳಿಕೆ ನಂತರವೂ ಭಾರತದಲ್ಲಿ ತನ್ನ ಉತ್ಪಾದನೆ ಮತ್ತು ಹೂಡಿಕೆ ಯೋಜನೆಗಳು ಯಥಾಸ್ಥಿತಿಯಲ್ಲಿ ಇರಲಿವೆ ಎಂದು ಆಪಲ್ ದೃಢಪಡಿಸಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಭಾರತದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡಿ ಅಮೆರಿಕದಲ್ಲಿ ಹೆಚ್ಚಿಸುವಂತೆ ಒತ್ತಾಯಿಸಿದ ನಂತರ ಇದು ಬಂದಿದೆ. ಆಪಲ್ ತನ್ನ ನಿಲುವಿನ ಬಗ್ಗೆ ಭಾರತದ ಸರ್ಕಾರಿ ಅಧಿಕಾರಿಗಳಿಗೆ ಭರವಸೆ ನೀಡಿತು. ಇದು ವಿಶ್ವದ ಪ್ರಮುಖ ಉತ್ಪಾದನಾ ನೆಲೆಯಾಗಿ ಭಾರತಕ್ಕೆ ನಿರಂತರ ಬದ್ಧತೆಯನ್ನು ಪ್ರದರ್ಶಿಸಿತು.
ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿದ ಸಿಎನ್ಬಿಸಿ-ಟಿವಿ 18 ವರದಿಯ ಪ್ರಕಾರ, ಆಪಲ್ ಭಾರತವನ್ನು ಪ್ರಮುಖ ಉತ್ಪಾದನಾ ಕೇಂದ್ರವಾಗಿಸುವುದಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
“ಭಾರತದಲ್ಲಿ ಆಪಲ್ನ ಹೂಡಿಕೆ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದು ಮೂಲಗಳು ತಿಳಿಸಿವೆ, ಟ್ರಂಪ್ ಅವರರ ಹೇಳಿಕೆಗಳ ಹೊರತಾಗಿಯೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯು ತನ್ನ ಯೋಜನೆ ಬಗ್ಗೆ “ಭಾರತ ಸರ್ಕಾರಕ್ಕೆ ಭರವಸೆ ನೀಡಿದೆ” ಎಂದು ಹೇಳಿದೆ.
ದೋಹಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ಆಪಲ್ ಸಿಇಒ ಟಿಮ್ ಕುಕ್ ಅವರೊಂದಿಗೆ ನೇರ ಸಂಭಾಷಣೆ ನಡೆಸಿದ್ದು, ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊರತುಪಡಿಸಿ, ಭಾರತದಲ್ಲಿ ಆಪಲ್ನ ಉತ್ಪಾದನಾ ಹೆಜ್ಜೆಗುರುತನ್ನು ವಿಸ್ತರಿಸುವುದು ಬೇಡ ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.
“ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಭಾರತದಲ್ಲಿ ನೀವು ಆಪಲ್ ಸಾಧನ ಉತ್ಪಾದನೆ ಮಾಡುವಲ್ಲಿ ನಮಗೆ ಆಸಕ್ತಿ ಇಲ್ಲ, ಅವರು ತಮ್ಮನ್ನು ತಾವು ನೋಡಿಕೊಳ್ಳಬಹುದು ಎಂದು ಹೇಳಿದ್ದೆ” ಎಂದು ಟ್ರಂಪ್ ಮೇ 15 ರಂದು ಕತಾರ್ನ ದೋಹಾದಲ್ಲಿ ನಡೆದ ವ್ಯಾಪಾರ-ವ್ಯವಹಾರದ ಕಾರ್ಯಕ್ರಮದಲ್ಲಿ ಹೇಳಿದರು ಎಂದು ಬ್ಲೂಮ್ಬರ್ಗ್ ವರದಿ ತಿಳಿಸಿದೆ.
ಅಮೆರಿಕದಲ್ಲಿ ಆಪಲ್ ತನ್ನ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಟ್ರಂಪ್ ಹೇಳಿದರು. ” ಅಮೆರಿಕದ ಆಮದುಗಳ ಮೇಲಿನ ಸುಂಕವನ್ನು ತೆಗೆದುಹಾಕಲು ಭಾರತ ಮುಂದಾಗಿದೆ ಎಂದು ಅವರು ಹೇಳಿದರು. “ಭಾರತವು ನಮಗೆ ಯಾವುದೇ ಸುಂಕ ವಿಧಿಸದೇ ಇರಲು ಸಿದ್ಧರಿರುವ ಪ್ರಸ್ತಾವನೆಯನ್ನು ನೀಡಿದೆ” ಎಂದು ದೋಹಾದಲ್ಲಿ ನಡೆದ ವ್ಯಾಪಾರ ನಾಯಕರ ಸಭೆಯಲ್ಲಿ ಅವರು ಹೇಳಿದರು.
ಭಾರತವು ಆಪಲ್ನ ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವಾಗುತ್ತಿದೆ. ಫಾಕ್ಸ್ಕಾನ್ ಮತ್ತು ಪೆಗಾಟ್ರಾನ್ನಂತಹ ಗುತ್ತಿಗೆ ತಯಾರಕರು ಭಾರತದ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯಡಿಯಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ ಮತ್ತು ಕಳೆದ ವರ್ಷದಲ್ಲಿ ಭಾರತದಿಂದ ಆಪಲ್ನ ಐಫೋನ್ ರಫ್ತು ದಾಖಲೆಯ ಮಟ್ಟವನ್ನು ತಲುಪಿದೆ.
ನಿಮ್ಮ ಕಾಮೆಂಟ್ ಬರೆಯಿರಿ