ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಯಾವಾಗಲೂ ಸಾಂಪ್ರದಾಯಿಕ ಕ್ಷೇತ್ರದಲ್ಲಿದೆ ಮತ್ತು ಪಕ್ಕದ ದೇಶದಿಂದ ಯಾವುದೇ ಪರಮಾಣು ಬೆದರಿಕೆ ಇಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ಸೋಮವಾರ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್​ ಸಿಂಧೂರ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ಕುರಿತು ಸಂಸದೀಯ ಸ್ಥಾಯಿ ಸಮಿತಿಗೆ ವಿವರಣೆ ನೀಡಿರುವ ಅವರು, ಸೇನಾ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ದ್ವಿಪಕ್ಷೀಯ ಮಟ್ಟದಲ್ಲಿ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಅಮೆರಿಕದ ಪಾತ್ರ ಇಲ್ಲ ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಪಹಲ್ಗಾಮ್​ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ನಡೆಸಿತ್ತು. ಇದರ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ಸೇನಾ ಸಂಘರ್ಷ ನಡೆಯಿತು. ಮೇ 10ರಂದು ಎರಡೂ ದೇಶಗಳು ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದು, ತಾನು ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದಕ್ಕೆ ವಿಪಕ್ಷಗಳು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದವು.

ಪ್ರಮುಖ ಸುದ್ದಿ :-   ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್-19 ಸೋಂಕು ಮತ್ತೆ ಹೆಚ್ಚಳ ; JN.1 ರೂಪಾಂತರ ಎಷ್ಟು ಅಪಾಯಕಾರಿ..?

ಭಾರತ ಮತ್ತು ಪಾಕಿಸ್ತಾನದ ಮಧ್ಯದ ಸಂಘರ್ಷ ನಿಲ್ಲಿಸಲು ನಿರ್ಧರಿಸಿದ ನಂತರ ಟ್ರಂಪ್ ಅವರ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ವಿಪಕ್ಷದ ಸದಸ್ಯರೊಬ್ಬರು ಕೇಳಿದಾಗ, ಅಮೆರಿಕ ಅಧ್ಯಕ್ಷರು ಹಾಗೆ ಮಾಡಲು ತಮ್ಮ ಅನುಮತಿ ಪಡೆದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಮಿಲಿಟರಿ ಕ್ರಮಗಳನ್ನು ನಿಲ್ಲಿಸಿದ ನಂತರ ಮಿಶ್ರಿಯನ್ನು ಟ್ರೋಲ್ ಮಾಡಿದ್ದನ್ನು ಸಮಿತಿ ಸದಸ್ಯರು ಸರ್ವಾನುಮತದಿಂದ ಖಂಡಿಸಿದರು ಮತ್ತು ಅವರ ವೃತ್ತಿಪರ ನಡವಳಿಕೆಯನ್ನು ಶ್ಲಾಘಿಸಿದರು ಎಂದು ಮೂಲಗಳು ತಿಳಿಸಿವೆ.
ಭಾರತದ ವಿರುದ್ಧ ಟರ್ಕಿಯ ಪ್ರತಿಕೂಲ ನಿಲುವಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಮಿಶ್ರಿ, ಆ ದೇಶವು ಸಾಂಪ್ರದಾಯಿಕವಾಗಿ ಭಾರತವನ್ನು ಬೆಂಬಲಿಸುವ ರಾಷ್ಟ್ರವಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ಶಶಿ ತರೂರ್ ಅಧ್ಯಕ್ಷತೆಯಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಂಸತ್ತಿನ ಸ್ಥಾಯಿ ಸಮಿತಿಯ ಸಭೆಯಲ್ಲಿ ಟಿಎಂಸಿಯ ಅಭಿಷೇಕ ಬ್ಯಾನರ್ಜಿ, ಕಾಂಗ್ರೆಸ್‌ನ ರಾಜೀವ್ ಶುಕ್ಲಾ ಮತ್ತು ದೀಪೇಂದರ ಹೂಡಾ, ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಬಿಜೆಪಿಯ ಅಪರಾಜಿತ ಸಾರಂಗಿ ಹಾಗೂ ಅರುಣ ಗೋವಿಲ್ ಸೇರಿದಂತೆ ಹಲವು ಸಂಸದರು ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ; ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement