ಅಂಕೋಲಾ: ನಡೆದುಕೊಂಡು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ (Electric Shock) ಯುವಕನೊಬ್ಬ ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದ ದಂಡೆಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಾಲೂಕಿನ ಅವರ್ಸಾ ದಂಡೇಬಾಗ ಬೇಟೆನಾಸ ದೇವಾಲಯದ ಸಮೀಪದ ನಿವಾಸಿ ಮಹಾಂತೇಶ ದೇವೇಂದ್ರ ಬಾನಾವಳಿಕರ(25) ಮೃತ ಯುವಕ ಎಂದು ಗುರುತಿಸಲಾಗಿದೆ.
ಗುರುವಾರ ಅವರ್ಸಾದ ಮನೆಯಿಂದ ಹೊರಗೆ ಹೋಗಿ ಮದ್ಯಾಹ್ನ ಊಟಕ್ಕೆ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಮೂರು ದಿನಗಳಿಂದ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ರಸ್ತೆಯ ಅಂಚಿಗೆ ಹರಿಯುತ್ತಿದ್ದ ನೀರಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೇ ತುಳಿದ ಪರಿಣಾಮವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದೇ ಸ್ಥಳದ ಅತೀ ಹತ್ತಿರದಲ್ಲಿ ಗೂಳಿಯೊಂದರ ಕಳೆ ಬರ ಪತ್ತೆಯಾಗಿದ್ದು ಅದು ಸಹ ವಿದ್ಯುತ್ ಪ್ರವಹಿಸಿ ಸತ್ತಿರಬಹುದು ಎಂದು ಶಂಕಿಸಲಾಗಿದೆ, ಕೆಲ ಹೊತ್ತಿನಲ್ಲಿ ಸ್ಥಳೀಯರಿಗೆ ಇದು ಗಮನಕ್ಕೆ ಬಂದಿದ್ದು ಕೂಡಲೇ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಿದರು ಎನ್ನಲಾಗಿದೆ.
ವಿದ್ಯುತ್ ಆಘಾತಕ್ಕೊಳಗಾದ ಯುವಕನನ್ನು ಸ್ಥಳೀಯರು ರಿಕ್ಷಾ ಮೂಲಕ ರಾಷ್ಟ್ರೀಯ ಹೆದ್ದಾರಿ ವರೆಗೆ ತಂದು ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದರು. ನಂತರ ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ