ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಹಾಗೂ ವರಿಷ್ಠ ನೇತಾರ ಲಾಲು ಪ್ರಸಾದ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜಪ್ರತಾಪ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ, ತೇಜಪ್ರತಾಪ ಅವರನ್ನು ಕುಟುಂಬದಿಂದಲೂ ಹೊರಹಾಕಿದ್ದಾರೆ.
ತೇಜಪ್ರತಾಪ ಅವರ “ಬೇಜವಾಬ್ದಾರಿಯುತ ನಡವಳಿಕೆ” ಮತ್ತು ಅವರು ಕುಟುಂಬದ ಮೌಲ್ಯಗಳು ಮತ್ತು ಸಾರ್ವಜನಿಕ ಸಭ್ಯತೆಯಿಂದ ವಿಮುಖರಾಗಿದ್ದಾರೆ ಎಂದು ಹೇಳಿದ್ದಾರೆ. ಆರ್‌ಜೆಡಿ ಮುಖ್ಯಸ್ಥರು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಹಂಚಿಕೊಂಡಿದ್ದು, ತೇಜ ಪ್ರತಾಪ ಈಗ ಕುಟುಂಬ ಮತ್ತು ಪಕ್ಷದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತೇಜ ಪ್ರತಾಪ ಅವರು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್ ಚರ್ಚೆಗೆ ಗ್ರಾಸವಾದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ತೇಜ ಪ್ರತಾಪ ಅವರು ಫೇಸ್‌ಬುಕ್‌ನಲ್ಲಿ ಇದು ಅನುಷ್ಕಾ ಯಾದವ್ ಅವರೊಂದಿಗಿನ ತಮ್ಮ ದೀರ್ಘಕಾಲದ ಸಂಬಂಧದ ಬಗ್ಗೆ ಪ್ರಕಟಿಸಿದ್ದರು. ಕಳೆದ 12 ವರ್ಷಗಳಿಂದ ಅವರ ಜೊತೆ ಸಂಬಂಧ ಹೊಂದಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು. ಇಷ್ಟೇ ಅಲ್ಲದೆ ತಮ್ಮ ಗೆಳತಿಯ ಚಿತ್ರವನ್ನೂ ಹಂಚಿಕೊಂಡಿದ್ದರು. ಅವರು ತಮ್ಮ ಪೋಸ್ಟ್‌ನಲ್ಲಿ, ‘ನಾನು ಇದನ್ನು ನಿಮ್ಮೆಲ್ಲರಿಗೂ ಬಹಳ ದಿನಗಳಿಂದ ಹೇಳಬೇಕೆಂದು ಬಯಸುತ್ತಿದ್ದೆ ಆದರೆ ಅದನ್ನು ಹೇಗೆ ಹೇಳಬೇಕೆಂದು ನನಗೆ ಅರ್ಥವಾಗಲಿಲ್ಲ.’ ಹಾಗಾಗಿ ಇಂದು ಈ ಪೋಸ್ಟ್ ಮೂಲಕ ನನ್ನ ಹೃದಯದ ಭಾವನೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ! ನಾನು ಹೇಳುತ್ತಿರುವುದು ನಿಮಗೆಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಬರೆದಿದ್ದರು. ಆದಾಗ್ಯೂ, ನಂತರ ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಮತ್ತು ಅವರ ಮತ್ತು ಅವರ ಕುಟುಂಬವನ್ನು ಕೆಣಕಲು ಫೋಟೋಗಳನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಹಿರಿಯ ಪುತ್ರನ ಸಾಮಾಜಿಕ ಮಾಧ್ಯಮ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾದ ನಂತರ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಯಾದವ್, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಕ್ರಮವನ್ನು ಪ್ರಕಟಿಸಿದರು. ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದು ಸಾಮಾಜಿಕ ನ್ಯಾಯಕ್ಕಾಗಿ ಪಕ್ಷದ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ. ತೇಜ ಪ್ರತಾಪ ಅವರ ನಡವಳಿಕೆ ಕುಟುಂಬ ಮೌಲ್ಯಗಳು ಅಥವಾ ಸಂಪ್ರದಾಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
“ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟ ದುರ್ಬಲಗೊಳ್ಳುತ್ತದೆ. ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕುಟುಂಬ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ, ಮೇಲಿನ ಸಂದರ್ಭಗಳಿಂದಾಗಿ, ನಾನು ಅವರನ್ನು ಪಕ್ಷ ಮತ್ತು ಕುಟುಂಬದಿಂದ ಹೊರಹಾಕುತ್ತಿದ್ದೇನೆ. ಇಂದಿನಿಂದ, ಅವರಿಗೆ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ರೀತಿಯ ಪಾತ್ರವಿರುವುದಿಲ್ಲ. ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದೆ” ಎಂದು ಲಾಲು ಯಾದವ್ ಹಿಂದಿಯಲ್ಲಿ ಬರೆದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಆತ ಒಳ್ಳೆಯದು ಮತ್ತು ಕೆಟ್ಟದ್ದು ಮತ್ತು ತನ್ನ ವೈಯಕ್ತಿಕ ಜೀವನದ ಅರ್ಹತೆ ಮತ್ತು ದೋಷಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆತನೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಸ್ವಂತ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ನಾನು ಯಾವಾಗಲೂ ಸಭ್ಯತೆಯನ್ನು ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಕುಟುಂಬದ ವಿಧೇಯ ಸದಸ್ಯರು ಸಾರ್ವಜನಿಕ ಜೀವನದಲ್ಲಿ ಈ ಕಲ್ಪನೆಯನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಅನುಸರಿಸಿದ್ದಾರೆ. ಧನ್ಯವಾದಗಳು ಎಂದು ಲಾಲುಪ್ರಸಾದ ಯಾದವ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಲಾಲು ಪ್ರಸಾದ ಯಾದವ್ ಅವರ ಕಿರಿಯ ಮಗ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಭಾನುವಾರ ಪಾಟ್ನಾದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಯಾರೇ ಆದರೂ ತಮ್ಮ ರಾಜಕೀಯ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಬೇಕು ಎಂದು ಹೇಳಿದರು.
“ನನ್ನ ಮಟ್ಟಿಗೆ, ನಾನು ಇದನ್ನೆಲ್ಲ ಇಷ್ಟಪಡುವುದಿಲ್ಲ ಅಥವಾ ಸಹಿಸುವುದಿಲ್ಲ. ವೈಯಕ್ತಿಕ ಜೀವನ ಪ್ರತ್ಯೇಕವಾಗಿರಬೇಕು. ಅವರು ಹಿರಿಯರು, ಮತ್ತು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆದರೆ ಲಾಲುಜಿ ಅವರು ಟ್ವೀಟ್ ಮೂಲಕ ತಮ್ಮ ಆಲೋಚನೆಗಳನ್ನು ಸ್ಪಷ್ಟಪಡಿಸಿದ್ದಾರೆ. ಅವರು ಸರಿ ಎಂದು ಭಾವಿಸಿದ್ದನ್ನು ಮಾಡಿದರು. ಮಾಧ್ಯಮಗಳ ಮೂಲಕ ನನಗೆ ಇದರ ಬಗ್ಗೆ ತಿಳಿದುಬಂತು” ಎಂದು ತೇಜಸ್ವಿ ಯಾದವ್ ಹೇಳಿದರು.
ಏತನ್ಮಧ್ಯೆ, ನಿತೀಶಕುಮಾರ ಅವರ ಜನತಾದಳ (ಯುನೈಟೆಡ್) ಪಕ್ಷವು ಲಾಲು ಪ್ರಸಾದ ಯಾದವ್ ಅವರನ್ನು ಟೀಕಿಸಿತು, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಲಾಲು ಯಾದವ್ ಅವರು ಈ ಕ್ರಮ ಕೈಗೊಂಡಿದ್ದು, ಇದು ಕಣ್ಣೊರೆಸುವ ತಂತ್ರ ಈ ಎಂದು ಕರೆದಿದೆ.
“ಲಾಲು ಜಿ ದಾರಿ ತಪ್ಪಿಸುತ್ತಿದ್ದಾರೆ. ಲಾಲು ಕುಟುಂಬವು ಐಶ್ವರ್ಯಾ (ತೇಜಪ್ರತಾಪ ಯಾದವ್ ಅವರ ಮಾಜಿ ಪತ್ನಿ) ವಿರುದ್ಧ ಘೋರ ಪಾಪ ಮಾಡಿದಾಗ ಅವರ ಆತ್ಮಸಾಕ್ಷಿ ಏಕೆ ಎಚ್ಚರಗೊಳ್ಳಲಿಲ್ಲ. ಇದು ಶುದ್ಧ ಅನೈತಿಕತೆ. ಅವರು ಚುನಾವಣೆಯ ಸಮಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಚುನಾವಣೆಯ ನಂತರ ತೇಜಪ್ರತಾಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ” ಎಂದು ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ ರಂಜನ್ ಹೇಳಿದ್ದಾರೆ.
ಐಶ್ವರ್ಯಾ ರೈ ಅವರೊಂದಿಗಿನ ತೇಜಪ್ರತಾಪ ಅವರ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ರೈ ಅವರ ಮೊಮ್ಮಗಳಾದ ಐಶ್ವರ್ಯ ಅವರೊಂದಿಗಿನ ತೇಜಪ್ರತಾಪ ಅವರ ವಿವಾಹವು ತಿಂಗಳುಗಳಲ್ಲಿ ಮುರಿದುಬಿತ್ತು, ಐಶ್ವರ್ಯಾ ಅವರು ತಮ್ಮ ಪತಿ ಮತ್ತು ಅತ್ತೆ ಮಾವಂದಿರು ಅವರನ್ನು ಹೊರಹಾಕಿದ್ದಾರೆ ಎಂದು ಆರೋಪಿಸಿದ್ದರು.
ಐಶ್ವರ್ಯಾ ಅವರ ತಂದೆ ಚಂದ್ರಿಕಾ ರಾಯ್ – ಸ್ವತಃ ಮಾಜಿ ಸಚಿವ, ಹಾಗೂ ಮಗಳಿಗೆ ಹೀಗಾದಾಗ ಪ್ರತಿಭಟನಾರ್ಥವಾಗಿ ಅವರು ಆರ್‌ಜೆಡಿಯನ್ನು ತೊರೆದರು, “ರಾಜಕೀಯವಾಗಿ ಮತ್ತು ಕಾನೂನುಬದ್ಧವಾಗಿ” ಲಾಲು ಕುಟುಂಬದ ವಿರುದ್ಧ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದರು.
ವಿವಾದಕ್ಕೆ ಕಾರಣವಾದ ಪೋಸ್ಟ್
ಶನಿವಾರ, ತೇಜಪ್ರತಾಪ ಪೋಸ್ಟ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹೆಚ್ಚಿನ ಗಮನ ಸೆಳೆಯಿತು. ಪೋಸ್ಟ್
ವೈರಲ್ ಆದ ಸ್ವಲ್ಪ ಸಮಯದ ನಂತರ ಸ್ಪಷ್ಟೀಕರಣ ಹಂಚಿಕೊಂಡ ತೇಜ ಪ್ರತಾಪ ಯಾದವ್, “ನನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಹ್ಯಾಕ್ ಮಾಡಲಾಗಿದೆ ಮತ್ತು ನನ್ನ ಮತ್ತು ನನ್ನ ಕುಟುಂಬಕ್ಕೆ ಕಿರುಕುಳ ನೀಡಲು ಮತ್ತು ಮಾನಹಾನಿ ಮಾಡಲು ನನ್ನ ಫೋಟೋಗಳನ್ನು ಅನುಚಿತವಾಗಿ ಎಡಿಟ್ ಮಾಡಲಾಗಿದೆ. ನನ್ನ ಹಿತೈಷಿಗಳು ಮತ್ತು ಅನುಯಾಯಿಗಳು ಜಾಗರೂಕರಾಗಿರಿ ಮತ್ತು ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ.
ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ತೇಜಪ್ರತಾಪ ಯಾದವ್ ಈ ವರ್ಷ ಸಮಷ್ಟಿಪುರದ ಹಸನ್‌ಪುರ ಸ್ಥಾನ ಬಿಟ್ಟು.ವೈಶಾಲಿ ಜಿಲ್ಲೆಯ ಮಹುವಾ ಸ್ಥಾನದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ, ಅವರು 2015 ರಲ್ಲಿ ಮಹುವಾ ಸ್ಥಾನವನ್ನು ಗೆದ್ದಿದ್ದರು ಮತ್ತು ಈಗ ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಸ್ಪರ್ಧಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ