ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ ಪ್ರದರ್ಶಕರ ಗುಂಪು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿ ಮದುಮಗನನ್ನು ಅಪಹರಿಸಿದೆ ಎಂದು ಆರೋಪಿಸಲಾಗಿದೆ.
ದಿಘ್ವಾ ದುಬೌಲಿ ಗ್ರಾಮದಲ್ಲಿ ಸಾಂಪ್ರದಾಯಿಕ “ಲೌಂಡಾ ನಾಚ್” ಪ್ರದರ್ಶನದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ನೃತ್ಯ ಪ್ರದರ್ಶನದ ಸಮಯದಲ್ಲಿ ವಿವಾದ ಭುಗಿಲೆದ್ದಿತು, ಪ್ರದರ್ಶನ ಕೊನೆಗೊಳಿಸುವ ಬಗೆಗಿನ ವಿವಾದವು ವಿಕೋಪಕ್ಕೆ ಹೋಗಿ ಹಿಂಸಾತ್ಮಕ ಘರ್ಷಣೆಗೆ ತಿರುಗಿತು. ತಂಡದ ಡಜನ್ಗಟ್ಟಲೆ ಸದಸ್ಯರು ಮದುವೆ ಆವರಣಕ್ಕೆ ನುಗ್ಗಿ, ವಧು ಮತ್ತು ಆಕೆಯ ಕುಟುಂಬ ಸೇರಿದಂತೆ ಬಂದ ಅತಿಥಿಗಳ ಮೇಲೆ ದಾಳಿ ಮಾಡಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು.
“ನಾವು ಮದುವೆ ಸಮಾರಂಭದಲ್ಲಿ ಬೇರೆ ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ, ಇದ್ದಕ್ಕಿದ್ದಂತೆ ಅವರು ಮನೆಗೆ ನುಗ್ಗಿ ವರನನ್ನು ಹೊಡೆಯಲು ಪ್ರಾರಂಭಿಸಿದರು. ಅವರು ವರನನ್ನು ಅಪಹರಿಸಿದರು. ಅವರು ಮನೆಯೊಳಗಿನಿಂದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಹ ದೋಚಿದರು,” ಎಂದು ವಧುವಿನ ತಾಯಿ ವಿದ್ಯಾವತಿ ದೇವಿ ಹೇಳಿದರು.
“ಲೌಂಡಾ ನಾಚ್ ತಂಡದ ಜನರು ಮಹಿಳೆಯರ ಮೇಲೆ ಹಲ್ಲೆ ನಡೆಸಿ ಹಲವರನ್ನು ಗಾಯಗೊಳಿಸಿದರು. ಅವರು ಹೊರಗೆ ಕುರ್ಚಿಗಳನ್ನು ಒಡೆದು, ವರನನ್ನು ಥಳಿಸಿ, ವಾಹನದಲ್ಲಿ ಕರೆದೊಯ್ದರು” ಎಂದು ಸ್ಥಳೀಯ ಸುನಿಲಕುಮಾರ ಹೇಳಿದ್ದಾರೆ. ಮತ್ತೊಬ್ಬ ಕುಟುಂಬದ ಸದಸ್ಯ ಟೆಟ್ರಿ ದೇವಿ, ದಾಳಿಕೋರರು ಛಾವಣಿಯ ಮೂಲಕ ಪ್ರವೇಶಿಸಿ ಇಡೀ ಕುಟುಂಬವನ್ನು ಭಯಭೀತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ವರ ಸೋನುಕುಮಾರ ಶರ್ಮಾ ತನ್ನ ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದರು ಮತ್ತು ಸಮಾರಂಭದ ನಂತರದ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಇದು ಉಂಟಾಯಿತು.
“ವರನು ಮಂಟಪದಲ್ಲಿ ವಿವಾಹ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದನು. ಭೋಜನದ ನಂತರ, ಅತಿಥಿಗಳು (ಬರಾತಿಗಳು) ನೃತ್ಯ ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ನರ್ತಕರು ಕಾರ್ಯಕ್ರಮವನ್ನು ಕೊನೆಗೊಳಿಸಲು ಬಯಸಿದ್ದರು, ಇದು ಅತಿಥಿಗಳನ್ನು ಕೆರಳಿಸಿತು. ಏತನ್ಮಧ್ಯೆ, ನೃತ್ಯಗಾರರೊಂದಿಗೆ ಜಗಳವಾಯಿತು. ಮುಸ್ಕಾನ್ ಕಿನ್ನರ್ ಎಂಬ ನರ್ತಕಿ ವಾಗ್ವಾದದಲ್ಲಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಬಂದರು ಆದರೆ ಅಪಹರಣಕಾರರು ಆಗಲೇ ಪರಾರಿಯಾಗಿದ್ದರು. ಆದಾಗ್ಯೂ, ಪೊಲೀಸರು ತೀವ್ರ ಶೋಧ ನಡೆಸಿ 7 ಗಂಟೆಗಳಲ್ಲಿ ವರನನ್ನು ಪತ್ತೆಹಚ್ಚಿದ್ದಾರೆ. ಅಪಹರಣಕಾರರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಯಿತು. ಆರ್ಥಿಕ ವಿವಾದವೇ ಇದಕ್ಕೆ ಕಾರಣ ಎಂದು ಪೊಲೀಸ್ ವರಿಷ್ಠಾಧಿಕಾರಿ ಅವಧೇಶ ದೀಕ್ಷಿತ್ ಹೇಳಿದ್ದಾರೆ.
“ಸಾಧು ಚೌಕ್‌ನಲ್ಲಿರುವ ಮದುವೆ ಮಂಟಪದಿಂದ ಒಬ್ಬ ವ್ಯಕ್ತಿಯನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಬಂದಿತ್ತು. ಅವರನ್ನು ಜಾಮೋ ಪ್ರದೇಶದಲ್ಲಿ ಪತ್ತೆ ಹಚ್ಚಿ ಸುಪರ್ದಿಗೆ ಪಡೆಯಲಾಗಿದೆ. ಹಣಕಾಸಿನ ವ್ಯವಹಾರದಿಂದ ಈ ವಿವಾದ ಉಂಟಾಗಿದೆ. ಕಾನೂನು ಕ್ರಮಗಳು ನಡೆಯುತ್ತಿವೆ” ಎಂದು ದೀಕ್ಷಿತ್ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ