ಗೋಕಾಕ | ಗೋಡೆ ಕುಸಿದು ಮಗು ಸಾವು ; ಇನ್ನೊಂದು ಮಗುವಿಗೆ ಗಾಯ

ಬೆಳಗಾವಿ: ಜಿಲ್ಲೆಯ ಗೋಕಾಕದ ಮಹಾಲಿಂಗೇಶ್ವರ ಕಾಲೊನಿಯಲ್ಲಿ ಸೋಮವಾರ ನಸುಕಿನಲ್ಲಿ ಮನೆ ಗೋಡೆ ಕುಸಿದು ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ ಹಾಗೂ ಮತ್ತೊಂದು ಮಗುವಿಗೆ ಗಾಯವಾಗಿದೆ.
ಮೃತಪಟ್ಟ ಮಗುವನ್ನು ಕೃತಿಕಾ ನಾಗೇಶ ಪೂಜಾರಿ (3.9 ವರ್ಷ) ಎಂದು ಗುರುತಿಸಲಾಗಿದೆ. ಈ ಮಗುವಿನ ಪಕ್ಕದಲ್ಲೇ ಮಲಗಿದ್ದ, ಈಕೆಯ ಐದು ವರ್ಷದ ಅಕ್ಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಲಾಗಿದೆ. ಭಾನುವಾರ ರಾತ್ರಿಯಿಡೀ ಜಿಟಿಜಿಟಿ ಮಳೆ ಸುರಿದಿದ್ದರಿಂದ ಒದ್ದೆಯಾದ ಮನೆಯ ಹಿಂಬದಿಯ ಮಣ್ಣಿನ ಗೋಡೆ ಕುಸಿದಿದೆ. ಗೋಡೆಗೆ ಹೊಂದಿಕೊಂಡೇ ಮಲಗಿದ್ದ ಮಗು ಕಲ್ಲು- ಮಣ್ಣಿನಡಿ ಸಿಲುಕಿ ಮೃತಪಟ್ಟಿದೆ ಎನ್ನಲಾಗಿದೆ. ಎಚ್ಚರಗೊಂಡ ತಂದೆ- ತಾಯಿ ಇನ್ನೊಂದು ಮಗುವನ್ನು ಅವಶೇಷಗಳಿಂದ ತೆಗೆದು ರಕ್ಷಿಸಿದರು. ಬದುಕುಳಿದ ಮಗುವನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಕಾಕ ಶಹರ ಠಾಣೆ ಪೊಲೀಸರು, ನಗರಸಭೆ ಅಧಿಕಾರಿಗಳು, ತಹಶೀಲ್ದಾರರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement