ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮೊದಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ ಅವರು ಮ್ಯಾಕ್ರನ್ ಕೆನ್ನೆಗೆ ಬಾರಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮ್ಯಾಕ್ರನ್ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಭಾನುವಾರ ಸಂಜೆ ಹನೋಯ್‌ಗೆ ಬಂದಿಳಿದರು. ಆದಾಗ್ಯೂ, ಅವರು ಬಂದಿಳಿದಾಗ ದಂಪತಿ ನಡುವಿನ ‘ಜಗಳ’ದ ತರಹದ ವೀಡಿಯೊ ಹೊರಹೊಮ್ಮಿತು. ದಂಪತಿ ನಡುವೆ ಏನೋ ವೈಮಸ್ಸು ಇದ್ದಂತೆ ಈ ವೀಡಿಯೊದಲ್ಲಿ ಕಂಡುಬಂದಿದ್ದು, ವೀಡಿಯೊ ವೈರಲ್ ಆಗಿರುವುದು ಮ್ಯಾಕ್ರನ್ ಅವರನ್ನು ಮುಜುಗರಕ್ಕೀಡು ಮಾಡಿದೆ.
ಮ್ಯಾಕ್ರನ್ ವಿಯೆಟ್ನಾಂನಿಂದ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಭಾನುವಾರ ಸಂಜೆ ಬಂದಿಳಿದರು. ಹನೋಯ್ ವಿಮಾನ ನಿಲ್ದಾಣದಲ್ಲಿ ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್, ಅಧ್ಯಕ್ಷ ಮ್ಯಾಕ್ರನ್ ಮುಖಕ್ಕೆ ಬಾರಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಫ್ರೆಂಚ್ ಅಧ್ಯಕ್ಷರು ಸ್ವಲ್ಪ ಹೊತ್ತು ಗಾಬರಿಗೊಂಡಂತೆ ಕಂಡರೂ, ಬೇಗನೆ ಶಾಂತರಾಗಿ ವಿಮಾನದ ನಿರ್ಗಮನ ದ್ವಾರದ ಮೂಲಕ ನಿಯೋಗಕ್ಕೆ ಕೈ ಬೀಸಿದರು. ಇದಾದ ಬಳಿಕ ಮ್ಯಾಕ್ರನ್ ಏನೂ ನಡೆದಿಲ್ಲ ಎಂಬಂತೆ ತಮ್ಮ ಕೈ ಹಿಡಿದುಕೊಳ್ಳುವಂತೆ ಬ್ರಿಗಿಟ್‌ಗೆ ಸನ್ನೆ ಮಾಡುತ್ತಾರೆ. ಆದರೆ ಅದನ್ನು ಲೆಕ್ಕಿಸದ ಬ್ರಿಗಿಟ್ ಪ್ರತ್ಯೇಕವಾಗಿಯೇ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ.
ಇದು ಇಬ್ಬರ ನಡುವಿನ ಜಗಳವೇ ಎಂದು ಖಚಿತಪಡಿಸಿಕೊಳ್ಳಲು ಪ್ರಥಮ ಮಹಿಳೆಯ ಮುಖಭಾವ ಅಥವಾ ದೇಹ ಭಾಷೆ ವೀಡಿಯೊದಲ್ಲಿ ಕಂಡುಬಂದಿಲ್ಲ.
ಹನೋಯ್‌ನಲ್ಲಿ ವರದಿಗಾರರೊಂದಿಗೆ ಮಾತನಾಡುವಾಗ ಘಟನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮ್ಯಾಕ್ರನ್, “ನಾವು ಸಾಮಾನ್ಯವಾಗಿ ಮಾಡುವಂತೆ ತಮಾಷೆ ಮಾಡುತ್ತಿದ್ದೆವು ಅಷ್ಟೆ” ಎಂದು ಹೇಳಿದ್ದಾರೆ. ಅಧ್ಯಕ್ಷ ಮ್ಯಾಕ್ರನ್ ಅವರ ಆಪ್ತ ಸಹಚರರು ನಂತರ ಸುದ್ದಿ ಸಂಸ್ಥೆ AFP ಜೊತೆ ಮಾತನಾಡುತ್ತಾ ಈ ಘಟನೆಯನ್ನು “ದಂಪತಿ ನಿರುಪದ್ರವ ಜಗಳ” ಎಂದು ಹೇಳಿದ್ದಾರೆ.
“ಅಧ್ಯಕ್ಷರು ಮತ್ತು ಅವರ ಪತ್ನಿ ಪ್ರವಾಸ ಪ್ರಾರಂಭವಾಗುವ ಮೊದಲು ಕೊನೆಯ ಬಾರಿಗೆ ತಮಾಷೆ ಮಾಡುವ ಮೂಲಕ ಖಿನ್ನತೆಯನ್ನು ನಿವಾರಿಸುತ್ತಿದ್ದ ಕ್ಷಣ ಅದು” ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ಮ್ಯಾಕ್ರನ್ ಆಗ್ನೇಯ ಏಷ್ಯಾಕ್ಕೆ ಒಂದು ವಾರದ ಅಧಿಕೃತ ಭೇಟಿಯಲ್ಲಿದ್ದಾರೆ, ವಿಯೆಟ್ನಾಂ ಅವರ ಮೊದಲ ದೇಶವಾಗಿದೆ. ಅವರು ಈ ವಾರದ ಕೊನೆಯಲ್ಲಿ ಇಂಡೋನೇಷ್ಯಾ ಮತ್ತು ಸಿಂಗಾಪುರಕ್ಕೂ ಭೇಟಿ ನೀಡಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ