
ಬೆಂಗಳೂರು: ಕನ್ನಡದ ಖ್ಯಾತ ಕವಿ, ನಾಟಕ ರಚನೆ ಕಾರರು, ಸಾಹಿತಿಯಾಗಿರುವ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ. ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ ಆಗಿದ್ದ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು, ಶುಕ್ರವಾರ (ಮೇ 30) ನಿಧನರಾಗಿದ್ದಾರೆ.
81 ವರ್ಷ ವಯಸ್ಸಿನ ಎಚ್‌ಎಸ್‌ವಿ ಎಂದೇ ಕರೆಯಲ್ಪಡುತ್ತಿದ್ದ ಅವರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ.
ಎಚ್ ಎಸ್ ವೆಂಕಟೇಶಮೂರ್ತಿ ಅವರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 11-2 ಗಂಟೆಯ ತನಕ ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು. “ಕನ್ನಡದಲ್ಲಿ ಕಥನ ಕವನಗಳು” ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕಲಬುರ್ಗಿಯಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ಸಾಹಿತ್ಯದ ಜೊತೆಗೆ ಸುಗಮಸಂಗೀತ, ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು “ಚಿನ್ನಾರಿ ಮುತ್ತ”, “ಕೋಟ್ರೇಶಿ ಕನಸು”, “ಅಮೆರಿಕಾ ಅಮೆರಿಕಾ”, “ಮೈತ್ರಿ”, “ಕಿರಿಕ್ ಪಾರ್ಟಿ” ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. “ಮುಕ್ತ”, “ಮಹಾಪರ್ವ” ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದಾರೆ. ಎಚ್ಎಸ್‌ವಿ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.
ಡಾ ಹೆಚ್ ಎಸ್ ವೆಂಕಟೇಶ ಮೂರ್ತಿಯವರು ನವೋದಯ ಕಾಲದ ಬರಹಗಾರರು ಮತ್ತು ಭಾವ ಕವಿಯಾಗಿದ್ದವರು. 2020 ರ ಹೊತ್ತಿಗೆ, ಅವರು ಕನ್ನಡದಲ್ಲಿ 100 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ “ಹೂವಿ” ನಾಟಕವನ್ನು ಭಾರತದಲ್ಲಿ ಐಸಿಎಸ್‌ಇ (ICSE) ಶೈಕ್ಷಣಿಕ ಮಂಡಳಿಯು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿ ಗುರುತಿಸಿದೆ.
ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ. ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದೀತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು-ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು.
ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಮೊದಲಾದುವು ಮುಖ್ಯ ನಾಟಕಗಳು. ಅಳಿಲು ರಾಮಾಯಣ, ಹಕ್ಕಿಸಾಲು, ಚಿನ್ನಾರಿಮುತ್ತ, ಅಜ್ಜಿ ಕತೆ ಹೇಳು-ಮುಖ್ಯ ಮಕ್ಕಳ ಕೃತಿಗಳು. ಈ ಮುಖೇನ ಇವರ ವೈಚಾರಿಕ ಪ್ರಬಂಧಗಳ ಸಂಪುಟ, ಅನಾತ್ಮಕಥನ, ಅಕ್ಕಚ್ಚುವಿನ ಅರಣ್ಯಪರ್ವ, ಆತ್ಮಕಥನಾತ್ಮಕ ಪ್ರಬಂಧಗಳು, ಚಲನಚಿತ್ರಗಳು, ಟೆಲಿ ಸೀರಿಯಲ್‌ಗಳಿಗೆ ಗೀತೆಗಳನ್ನು ಬರೆದರು. ನಂತರ ಕುಮಾರವ್ಯಾಸ, ಪಂಪ, ಲಕ್ಷ್ಮೀಶ, ವಾಲ್ಮೀಕಿ ಮೊದಲಾದವರ ಕೃತಿಗಳನ್ನು ತಿಳಿಗನ್ನಡದಲ್ಲಿ ಕಾವ್ಯದಲ್ಲಿ ಬರೆಯುವ ಕೆಲಸ ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟರು.
ಅವರ “ಕಥನ ಕವನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ (2013) ಲಭಿಸಿದೆ. ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ- ಇವರು ಪಡೆದ ಕೆಲವು ಮುಖ್ಯ ಗೌರವ ಪುರಸ್ಕಾರಗಳು.


ನಿಮ್ಮ ಕಾಮೆಂಟ್ ಬರೆಯಿರಿ