
ಬೆಂಗಳೂರು : ಐಪಿಎಲ್ ಪ್ರಶಸ್ತಿ ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಬುಧವಾರ ಅಭಿನಂದಿಸುವ ಕಾರ್ಯಕ್ರಮದ ವೇಳೆ ಕನಿಷ್ಠ 11 ಜನರು ಕಾಲ್ತುಳಿತದಿಂದ ಸಾವಿಗೀಡಾಗಿದ್ದಾರೆ ಮತ್ತು ಸುಮಾರು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅಪಾರ ಜನಸಮೂಹ ಸೇರಿತ್ತು. ಮಾನ್ಯ ಟಿಕೆಟ್ಗಳು ಮತ್ತು ಪಾಸ್ಗಳನ್ನು ಹೊಂದಿರುವ ಜನರಿಗೆ ಇದು ನಿಗದಿಯಾಗಿದ್ದರೂ, ಅಭಿಮಾನಿಗಳು ತಮ್ಮ ತಂಡದ ಕ್ರಿಕೆಟ್ ಆಟಾರರನ್ನು ನೋಡಲು ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಸರ್ಕಾರಕ್ಕೆ ಒದಗಿಸಲಾದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕ್ರೀಡಾಂಗಣದ ಆವರಣದ ಬಳಿಯಿರುವ ಚರಂಡಿಯ ಮೇಲೆ ಇರಿಸಲಾದ ತಾತ್ಕಾಲಿಕ ಸ್ಲ್ಯಾಬ್ ಮೇಲೆ ಜನರು ನಿಂತಿದ್ದರಿಂದ ಭಾರಕ್ಕೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ. ಹಠಾತ್ ಕುಸಿತವು ಭೀತಿಯನ್ನು ಉಂಟುಮಾಡಿತು ಮತ್ತು ಇದರಿಂದ ಕಾಲ್ತುಳಿತ ಸಂಭವಿಸಿತು, ಇದರ ಪರಿಣಾಮವಾಗಿ ಅನೇಕ ಸಾವುನೋವುಗಳು ಮತ್ತು ಗಾಯಗಳು ಸಂಭವಿಸಿದವು ಎನ್ನಲಾಗಿದೆ.

ಗಾಯಗೊಂಡು ಪ್ರಜ್ಞಾಹೀನರಾದ ಜನರನ್ನು ಪೊಲೀಸರು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸಂಭ್ರಮಾಚರಣೆ ವೀಕ್ಷಿಸಲು ಬಂದಿದ್ದ ಅನೇಕ ಜನರು ಕಾಲ್ತುಳಿತದ ನಡುವೆ ಮೂರ್ಛೆ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರಲ್ಲಿ 13 ರಿಂದ 35 ವರ್ಷ ವಯಸ್ಸಿನ ಯುವಕರು ಮತ್ತು ಮಹಿಳೆಯರು ಸೇರಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ, ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ವೈದೇಹಿ ಆಸ್ಪತ್ರೆ ನಾಲ್ಕು ಸಾವುಗಳನ್ನು ವರದಿ ಮಾಡಿದೆ ಮತ್ತು ಮಣಿಪಾಲ್ ಆಸ್ಪತ್ರೆ ಒಂದು ಸಾವನ್ನು ದೃಢಪಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದರು. ಸ್ಥಳದಿಂದ ಬಂದ ದೃಶ್ಯಗಳು ಗಾಯಾಳುಗಳನ್ನು ವೈದ್ಯಕೀಯ ಸಹಾಯಕ್ಕಾಗಿ ಒಯ್ಯುತ್ತಿರುವುದನ್ನು ತೋರಿಸಿವೆ. ಆಂಬ್ಯುಲೆನ್ಸ್ಗಳು ಭಾರೀ ಜನಸಂದಣಿಯ ಮೂಲಕ ಸಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು ಕಂಡುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, “ಅಗಾಧ ಜನಸಂದಣಿ ಇತ್ತು. ಏನಾಯಿತು ಮತ್ತು ಕಾಲ್ತುಳಿತಕ್ಕೆ ಕಾರಣವೇನು ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.
ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ; ತನಿಖೆಗೆ ಆದೇಶ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ವೇಳೆ ಬುಧವಾರ ನಡೆದ ಕಾಲ್ತುಳಿತ ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಘಟನೆ ನಡೆದಿಲ್ಲ. ಆದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಂತ ನಡೆದಿದೆ. ಯಾರೂ ಇಂತಹ ದುರ್ಘಟನೆ ನಿರೀಕ್ಷಿಸಿರಲಿಲ್ಲ. ಸ್ಟೇಡಿಯಂನಲ್ಲಿ 35 ಸಾವಿರ ಆಸನ ಸಾಮರ್ಥ್ಯವಿದೆ. ಆದರೆ ಎರಡು ಮೂರು ಲಕ್ಷ ಜನ ಆಗಮಿಸಿದ್ದರು. ಹೀಗಾಗಿ ದುರ್ಘಟನೆ ಸಂಭವಿಸಿದೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ 10 ಲಕ್ಷ ರೂ.ಗಳನ್ನು ಪರಿಹಾರ ನೀಡಲಾಗುತ್ತದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ. ಚಿಕಿತ್ಸೆ ಖರ್ಚನ್ನು ಸರ್ಕಾರ ಭರಿಸಲಿದೆ ಘಟನೆ ಕುರಿತು ಮ್ಯಾಜಿಸ್ಟ್ರಿಯಲ್ ತನಿಖೆಗೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ